ADVERTISEMENT

IND vs ENG U19: ಸೂರ್ಯವಂಶಿ ಮತ್ತೆ ‘ವೈಭವ’

ಪಿಟಿಐ
Published 5 ಜುಲೈ 2025, 16:30 IST
Last Updated 5 ಜುಲೈ 2025, 16:30 IST
   

ಹೋವ್‌ (ಇಂಗ್ಲೆಂಡ್‌): ಭಾರತ ಕ್ರಿಕೆಟ್‌ನ ಯುವ ತಾರೆ ವೈಭವ್ ಸೂರ್ಯವಂಶಿ ಅವರು ಇಂಗ್ಲೆಂಡ್‌ ವಿರುದ್ಧ ಯುವ ಏಕದಿನ (19 ವರ್ಷದೊಳಗಿವರ) ಕ್ರಿಕೆಟ್‌ ಪಂದ್ಯದಲ್ಲಿ ಶನಿವಾರ ಕೇವಲ 78 ಎಸೆತಗಳಲ್ಲಿ 143 ರನ್‌ ಬಾರಿಸಿದರು. ಆ ಹಾದಿಯಲ್ಲಿ ಮತ್ತಷ್ಟು  ದಾಖಲೆಗಳನ್ನು ಮುರಿದರು. ಮೊದಲು ಆಡಿದ ಭಾರತ 9 ವಿಕೆಟ್‌ಗೆ 369 ರನ್‌ಗಳ ಭಾರಿ ಮೊತ್ತ ಗಳಿಸಿತು.

ಈ ಪಂದ್ಯದಲ್ಲಿ ಆರಂಭ ಆಟಗಾರ ವೈಭವ್ ಜೊತೆಗೆ ಮಧ್ಯಮ ಕ್ರಮಾಂಕದ ಆಟಗಾರ ವಿಹಾನ್ ಮಲ್ಹೋತ್ರಾ ಕೂಡ ಶತಕ (129, 121 ಎಸೆತ, 4x6, 6x9) ಬಾರಿಸಿದರು. ಸೂರ್ಯವಂಶಿ ಇನಿಂಗ್ಸ್‌ನಲ್ಲಿ 13 ಬೌಂಡರಿ, 10 ಸಿಕ್ಸರ್‌ಗಳಿದ್ದವು.

ಇವರಿಬ್ಬರು ಎರಡನೇ ವಿಕೆಟ್‌ಗೆ 219 ರನ್ ಜೊತೆಯಾಟದಲ್ಲಿ ಭಾಗಿಯಾದರು. ವೈಭವ್‌ 52 ಎಸೆತಗಳಲ್ಲಿ ಶತಕ ದಾಟಿದರು.

ADVERTISEMENT

ಹಲವು ದಾಖಲೆ: ಎಂದಿನಂತೆ ನಿರ್ಭೀತವಾಗಿ ಬ್ಯಾಟ್‌ ಬೀಸಿದ ವೈಭವ್‌ ಯುವ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಶತಕ ಬಾರಿಸಿದ ವಿಶ್ವದ ಅತಿ ಕಿರಿಯ ಆಟಗಾರ ಎನಿಸಿದರು. ಈ ಹಿಂದಿನ ದಾಖಲೆ ಬಾಂಗ್ಲಾದೇಶದ ನಜ್ಮುಲ್‌ ಹುಸೇನ್ ಶಾಂತೊ ಹೆಸರಿನಲ್ಲಿತ್ತು. ಅವರು 2013ರಲ್ಲಿ 14 ವರ್ಷ 241 ದಿನಗಳಾಗಿದ್ದಾಗ ಶ್ರೀಲಂಕಾ ವಿರುದ್ಧ ಸಿಲ್ಹೆಟ್‌ನಲ್ಲಿ ಶತಕ ಬಾರಿಸಿದ್ದರು. ಭಾರತದ ಪರ ಈ ಹಿಂದಿನ ದಾಖಲೆ ಸರ್ಫರಾಜ್‌ ಖಾನ್‌ ಹೆಸರಿನಲ್ಲಿತ್ತು. ಅವರು 2013ರಲ್ಲಿ 15 ವರ್ಷ 338 ದಿನಗಳಾಗಿದ್ದಾಗ ದಕ್ಷಿಣ ಆಫ್ರಿಕಾ ಅಂಡರ್‌ 19 ತಂಡದ ವಿರುದ್ಧ ಶತಕ ಬಾರಿಸಿದ್ದರು.

ಇದು ಯುವ ಏಕದಿನ ಕ್ರಿಕೆಟ್‌ನ ಅತಿ ವೇಗದ ಶತಕವಾಗಿದೆ. ಈ ಹಿಂದಿನ ದಾಖಲೆ ಪಾಕಿಸ್ತಾನದ ಕ್ರಮಾನ್ ಗುಲಾಂ (2013ರಲ್ಲಿ ಇಂಗ್ಲೆಂಡ್‌ 19 ವರ್ಷದೊಳಗಿನ ತಂಡದ ವಿರುದ್ಧ 53 ಎಸೆತಗಳಲ್ಲಿ) ಹೆಸರಿನಲ್ಲಿತ್ತು. ಭಾರತದ ಪರ ಅಂಗದ್‌ ಬಾವಾ ಅವರು 2022ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ಯುಗಾಂಡ ವಿರುದ್ಧ 69 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.