ADVERTISEMENT

ಎಸ್‌ಎಂಎಟಿ | ಕರ್ನಾಟಕಕ್ಕೆ ರೋಚಕ ಜಯ; ಸ್ಮರಣ್‌ ಅರ್ಧ ಶತಕ

ಪಿಟಿಐ
Published 26 ನವೆಂಬರ್ 2025, 14:13 IST
Last Updated 26 ನವೆಂಬರ್ 2025, 14:13 IST
<div class="paragraphs"><p>ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)</p></div>

ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)

   

ಅಹಮದಾಬಾದ್: ಕರ್ನಾಟಕ ತಂಡವು, ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ಕೊನೆಯ ಎಸೆತದಲ್ಲಿ ಐದು ವಿಕೆಟ್‌ಗಳ ರೋಚಕ ಜಯಗಳಿಸಿ ಶುಭಾರಂಭ ಮಾಡಿತು. ರಣಜಿ ಟ್ರೋಫಿಯ ಉತ್ತಮ ಆಟ ಮುಂದುವರಿಸಿದ ರವಿಚಂದ್ರನ್ ಸ್ಮರಣ್ 67 ರನ್ (41ಎ, 4x7, 6x2) ಗಳಿಸಿ ಮಿಂಚಿದರು.

ಬುಧವಾರ ನಡೆದ ‘ಡಿ’ ಗುಂಪಿನ ಈ ಪಂದ್ಯದಲ್ಲಿ ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ಉತ್ತರಾಖಂಡ ತಂಡವು 20 ಓವರುಗಳಲ್ಲಿ 5 ವಿಕೆಟ್‌ಗೆ 197 ರನ್‌ಗಳ ಸವಾಲಿನ ಮೊತ್ತ ಗಳಿಸಿತು.

ADVERTISEMENT

ನಾಯಕ ಕುನಾಲ್ ಚಂದೇಲ ಕೇವಲ 49 ಎಸೆತಗಳಲ್ಲಿ ಏಳು ಬೌಂಡರಿ, ಐದು ಸಿಕ್ಸರ್‌ಗಳಿದ್ದ 88 ರನ್ ಬಾರಿಸಿದರು. ಅವರಿಗೆ ಬೆಂಬಲ ನೀಡಿದ ಆಂಜನೇಯ ಸೂರ್ಯವಂಶಿ 36 ಎಸೆತಗಳಲ್ಲಿ 54 ರನ್ (4x5, 6x3) ಗಳಿಸಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 122 ರನ್ ಸೇರಿಸಿದರು. ಕೊನೆಯಲ್ಲಿ ಶಾಶ್ವತ್ ದಂಗ್ವಾಲ್‌ ಬಿರುಸಿನ 27 ರನ್ (13ಎ, 4x4, 6x1) ಗಳಿಸಿದ್ದರಿಂದ ತಂಡದ ಮೊತ್ತ 200ರ ಹತ್ತಿರ ತಲುಪಿತು. ಕರ್ನಾಟಕದ ಕಡೆ ವಿದ್ವತ್ ಕಾವೇರಪ್ಪ 37 ರನ್ನಿಗೆ 3 ವಿಕೆಟ್ ಪಡೆದರು.

ಕರ್ನಾಟಕದ ಆರಂಭ ಉತ್ತಮವಾಗಿರಲಿಲ್ಲ. ತಂಡ 15 ರನ್ ಗಳಿಸುವಷ್ಟರಲ್ಲಿ ಎದುರಾಳಿ ತಂಡದ ಎಡಗೈ ವೇಗದ ಬೌಲರ್ ರಾಜನ್ ಕುಮಾರ್ (24ಕ್ಕೆ3) ಬೌಲಿಂಗ್‌ನಲ್ಲಿ ಕೃಷ್ಣನ್ ಶ್ರೀಜಿತ್ (7) ಮತ್ತು ಅನುಭವಿ ಕರುಣ್ ನಾಯರ್ (4) ಅವರನ್ನು ಕಳೆದುಕೊಂಡಿತ್ತು. ಆದರೆ ನಾಯಕ ಮಯಂಕ್ ಅಗರವಾಲ್ (29) ಜೊತೆಗೂಡಿದ ಸ್ಮರಣ್ ತಂಡದ ನೆರವಿಗೆ ಬಂದರು. 84 ರನ್ ಜೊತೆಯಾಟದಿಂದ ಕರ್ನಾಟಕ ಚೇತರಿಸಿತು. 

ಆದರೆ ಮಯಂಕ್, ಸ್ಮರಣ್ ಮತ್ತು ಅಭಿನವ್ ಮನೋಹರ್ (10) ಅವರನ್ನು 29 ರನ್‌ಗಳ ಅಂತರದಲ್ಲಿ ಕಳೆದುಕೊಂಡಾಗ ಉತ್ತರಾಖಂಡ ಮೇಲುಗೈ ಪಡೆಯುವಂತೆ ಕಂಡಿತು. ಒಂದು ಹಂತದಲ್ಲಿ ಮಾಜಿ ಚಾಂಪಿಯನ್ನರಿಗೆ 6.4 ಓವರುಗಳಲ್ಲಿ 70 ರನ್ ಗಳಿಸಬೇಕಾದ ಸವಾಲು ಎದುರಾಯಿತು.

ಕೆಳಕ್ರಮಾಂಕದಲ್ಲಿ ಪ್ರವೀಣ್ ದುಬೆ (38, 24ಎ) ಮತ್ತು ಶುಭಾಂಗ್ ಹೆಗ್ಡೆ (29, 18ಎ) ಅಮೂಲ್ಯ ಆಟವಾಡಿ ತಂಡವನ್ನು ಅಂತಿಮ ಎಸೆತದಲ್ಲಿ ಗುರಿ ತಲುಪಿಸಿದರು.

ಸಂಕ್ಷಿಪ್ತ ಸ್ಕೋರು: ಉತ್ತರಾಖಂಡ: 20 ಓವರುಗಳಲ್ಲಿ 5ಕ್ಕೆ 197 (ಕುನಾಲ್ ಚಂದೇಲ 88, ಆಂಜನೇಯ ಸೂರ್ಯವಂಶಿ 54; ವಿದ್ವತ್ ಕಾವೇರಪ್ಪ 37ಕ್ಕೆ3); ಕರ್ನಾಟಕ: 20 ಓವರುಗಳಲ್ಲಿ 5ಕ್ಕೆ 198 (ಆರ್‌.ಸ್ಮರಣ್ 67, ಪ್ರವೀಣ್ ದುಬೆ ಔಟಾಗದೇ 38, ಶುಭಾಂಗ್ ಹೆಗ್ಡೆ ಔಟಾಗದೇ 29; ರಾಜನ್ ಕುಮಾರ್ 24ಕ್ಕೆ3). ಪಂದ್ಯದ ಆಟಗಾರ: ಆರ್‌.ಸ್ಮರಣ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.