ADVERTISEMENT

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಕ್ರಿಕೆಟ್‌: ಕರ್ನಾಟಕಕ್ಕೆ ಸಾಟಿಯಾಗದ ಅರುಣಾಚಲ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 14:22 IST
Last Updated 18 ಅಕ್ಟೋಬರ್ 2022, 14:22 IST
ವಿ.ಕೌಶಿಕ್‌
ವಿ.ಕೌಶಿಕ್‌   

ಚಂಡೀಗಡ (ಪಿಟಿಐ): ಕರ್ನಾಟಕ ತಂಡದವರು ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದರು.

ಮೊಹಾಲಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಅರುಣಾಚಲ ಪ್ರದೇಶ 19.2 ಓವರ್‌ಗಳಲ್ಲಿ 75 ರನ್‌ಗಳಿಗೆ ಆಲೌಟಾಯಿತು.

ವೇಗದ ಬೌಲರ್‌ಗಳಾದ ವಿ.ಕೌಶಿಕ್‌ (5ಕ್ಕೆ 3) ಮತ್ತು ವಿದ್ವತ್‌ ಕಾವೇರಪ್ಪ (22ಕ್ಕೆ3) ಅವರ ಮೊಚನಾದ ದಾಳಿಗೆ ಅರುಣಾಚಲ ಬ್ಯಾಟರ್‌ಗಳು ಪರದಾಡಿದರು. ಸ್ಪಿನ್ನರ್‌ಗಳಾದ ಜೆ.ಸುಚಿತ್‌ ಮತ್ತು ಕೆ.ಗೌತಮ್‌ (12ಕ್ಕೆ 1) ಅವರೂ ಕೈಚಳಕ ತೋರಿದರು. ಎದುರಾಳಿ ತಂಡದ ಮೂವರು ಮಾತ್ರ ಎರಡಂಕಿಯ ಮೊತ್ತ ತಲುಪಿದರು.

ADVERTISEMENT

ಗೆಲುವಿಗೆ 76 ರನ್‌ಗಳ ಗುರಿ ಕರ್ನಾಟಕಕ್ಕೆ ಸವಾಲಾಗಲೇ ಇಲ್ಲ. ಮಯಂಕ್‌ ಅಗರವಾಲ್‌ (ಔಟಾಗದೆ 47, 21 ಎ., 4X5, 6X3) ಮತ್ತು ದೇವದತ್ತ ಪಡಿಕ್ಕಲ್ (ಔಟಾಗದೆ 28, 20 ಎ., 4X5) ಅವರು ಕೇವಲ 6.5 ಓವರ್‌ಗಳಲ್ಲಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಐದು ಪಂದ್ಯಗಳಲ್ಲಿ ನಾಲ್ಕನೇ ಗೆಲುವು ಪಡೆದ ಮಯಂಕ್‌ ಅಗರವಾಲ್‌ ಬಳಗ, 16 ಪಾಯಿಂಟ್ಸ್‌ಗಳೊಂದಿಗೆ ‘ಸಿ’ ಗುಂ‍ಪಿನಲ್ಲಿ ಅಗ್ರಸ್ಥಾನದಲ್ಲಿದೆ. ಹರಿಯಾಣ ಮತ್ತು ಸರ್ವಿಸಸ್‌ ಬಳಿಕದ ಸ್ಥಾನಗಳಲ್ಲಿವೆ.

ಸಂಕ್ಷಿಪ್ತ ಸ್ಕೋರ್‌: ಅರುಣಾಚಲ ಪ್ರದೇಶ 19.2 ಓವರ್‌ಗಳಲ್ಲಿ 75 (ರೋಹನ್‌ ಶರ್ಮಾ 18, ವಿ.ಕೌಶಿಕ್‌ 5ಕ್ಕೆ 3, ವಿದ್ವತ್‌ ಕಾವೇರಪ್ಪ 22ಕ್ಕೆ 3, ಜೆ.ಸುಚಿತ್‌ 15ಕ್ಕೆ 2, ಕೆ.ಗೌತಮ್‌ 12ಕ್ಕೆ 1, ವೈಶಾಖ್‌ ವಿಜಯಕುಮಾರ್‌ 17ಕ್ಕೆ 1)

ಕರ್ನಾಟಕ 6.5 ಓವರ್‌ಗಳಲ್ಲಿ 76 (ಮಯಂಕ್‌ ಅಗರವಾಲ್ ಔಟಾಗದೆ 47, ದೇವದತ್ತ ಪಡಿಕ್ಕಲ್‌ ಔಟಾಗದೆ 28) ಫಲಿತಾಂಶ: ಕರ್ನಾಟಕಕ್ಕೆ 10 ವಿಕೆಟ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.