ADVERTISEMENT

ಕರ್ನಾಟಕದ ಜಯಕ್ಕೆ ಶ್ರೀಜಿತ್ ಶ್ರೀಕಾರ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ: ಹಾಲಿ ಚಾಂಪಿಯನ್ನರ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 16:32 IST
Last Updated 10 ಜನವರಿ 2021, 16:32 IST
ಕೆ.ಎಲ್. ಶ್ರೀಜಿತ್  –ಪ್ರಜಾವಾಣಿ ಸಂಗ್ರಹ
ಕೆ.ಎಲ್. ಶ್ರೀಜಿತ್  –ಪ್ರಜಾವಾಣಿ ಸಂಗ್ರಹ   

ಬೆಂಗಳೂರು: ಪದಾರ್ಪಣೆ ಪಂದ್ಯದಲ್ಲಿಯೇ ಮಿಂಚಿದ ಕೆ.ಎಲ್. ಶ್ರೀಜಿತ್ಬ್ಯಾಟಿಂಗ್‌ ಬಲದಿಂದ ಕರ್ನಾಟಕ ತಂಡವು ಭಾನುವಾರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಜಮ್ಮು ಕಾಶ್ಮೀರದ ವಿರುದ್ಧ 43 ರನ್‌ಗಳಿಂದ ಗೆದ್ದು, ಶುಭಾರಂಭ ಮಾಡಿತು.

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಎಲೀಟ್ ಎ ಗುಂಪಿನ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಜಮ್ಮು–ಕಾಶ್ಮೀರ ತಂಡದ ನಾಯಕ ಪರ್ವೇಜ್ ರಸೂಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಕರ್ನಾಟಕ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 150 ರನ್ ಗಳಿಸಿತು. ರಸೂಲ್ ಬಳಗವು 18.4 ಓವರ್‌ಗಳಲ್ಲಿ 107 ರನ್‌ಗಳಿಗೆ ಸರ್ವಪತನವಾಯಿತು. ಪ್ರಸಿದ್ಧ ಕೃಷ್ಣ ಮೂರು ವಿಕೆಟ್ ಗಳಿಸಿದರು. ಅಭಿಮನ್ಯು ಮಿಥುನ್, ಜೆ. ಸುಚಿತ್ ಮತ್ತು ಕೃಷ್ಣಪ್ಪ ಗೌತಮ್ ತಲಾ ಎರಡು ವಿಕೆಟ್ ಕಬಳಿಸಿದರು.

ಶ್ರೀಜಿತ್ ಮಿಂಚು: ಕರ್ನಾಟಕ ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೇಗನೆ ಔಟಾದಾಗ, ಚೊಚ್ಚಲ ಪಂದ್ಯವಾಡುತ್ತಿರುವ ಶ್ರೀಜಿತ್ (ಔಟಾಗದೆ 48; 31ಎ,1ಬೌಂ, 3ಸಿ) ಆಸರೆಯಾದರು.

ADVERTISEMENT

ಐದನೇ ಕ್ರಮಾಂಕದಲ್ಲಿ ಶ್ರೀಜಿತ್ ಕ್ರೀಸ್‌ಗೆ ಬರುವ ಮುನ್ನ ಐಪಿಎಲ್ ಸ್ಟಾರ್ ದೇವದತ್ತ ಪಡಿಕ್ಕಲ್ (18 ರನ್), ನಾಯಕ ಕರುಣ್ ನಾಯರ್ (27ರನ್), ರೋನ್ ಕದಂ (1) ಮತ್ತು ಉಪನಾಯಕ ಪವನ್ ದೇಶಪಾಂಡೆ (21 ರನ್) ಡಗ್‌ಔಟ್‌ಗೆ ಮರಳಿದ್ದರು.

ಎಡಗೈ ಬ್ಯಾಟ್ಸ್‌ಮನ್ ಶ್ರೀಜಿತ್ ಮತ್ತು ಗದುಗಿನ ಹುಡುಗ ಅನಿರುದ್ಧ ಜೋಶಿ (29; 26ಎ,3 ಬೌಂ) ಐದನೇ ವಿಕೆಟ್ ಜೊತೆಯಾಟದಲ್ಲಿ 65 ರನ್ ಸೇರಿಸಿದರು. ಇದರಿಂದಾಗಿ ತಂಡವು ಗೌರವಾರ್ಹ ಮೊತ್ತ ಗಳಿಸಲು ಸಾಧ್ಯವಾಯಿತು.

ಸತತ ಎರಡು ಬಾರಿ ಪ್ರಶಸ್ತಿ ಜಯಿಸಿರುವ ಕರ್ನಾಟಕ ತಂಡದ ಎದುರು ಅನುಭವಿ ಪರ್ವೇಜ್ ರಸೂಲ್ (18ಕ್ಕೆ2) ಮತ್ತು ಅಕೀಬ್ ನಬಿ (30ಕ್ಕೆ 2) ಉತ್ತಮ ಬೌಲಿಂಗ್ ಮಾಡಿದರು. ಹೋದ ಸಲದ ಐಪಿಎಲ್‌ನಲ್ಲಿ ಆಡಿದ್ದ ಜಮ್ಮು –ಕಾಶ್ಮೀರ ತಂಡದ ಅಬ್ದುಲ್ ಸಮದ್ ವಿಕೆಟ್ ಗಳಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.