ADVERTISEMENT

ಹಾಲಿ ಚಾಂಪಿಯನ್ ಕರ್ನಾಟಕಕ್ಕೆ ರೈಲ್ವೆ ಸವಾಲು

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 16:24 IST
Last Updated 15 ಜನವರಿ 2021, 16:24 IST
ನಾಯಕ ಕರುಣ್ ನಾಯರ್, ಪವನ್ ದೇಶಪಾಂಡೆ, ಅಭಿಮನ್ಯು ಮಿಥುನ್ ಮತ್ತು ಕೆ. ಗೌತಮ್ –ಪ್ರಜಾವಾಣಿ ಚಿತ್ರ ಸಂಗ್ರಹ
ನಾಯಕ ಕರುಣ್ ನಾಯರ್, ಪವನ್ ದೇಶಪಾಂಡೆ, ಅಭಿಮನ್ಯು ಮಿಥುನ್ ಮತ್ತು ಕೆ. ಗೌತಮ್ –ಪ್ರಜಾವಾಣಿ ಚಿತ್ರ ಸಂಗ್ರಹ   

ಬೆಂಗಳೂರು: ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ರೈಲ್ವೆಸ್ ತಂಡವನ್ನು ಎದುರಿಸಲಿದೆ.

ನಗರದ ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಎಲೀಟ್ ಎ ಗುಂಪಿನಲ್ಲಿ ನಡೆದ ಮೂರು ಪಂದ್ಯಗಳಲ್ಲಿ ಕರುಣ್ ನಾಯರ್ ಬಳಗವು ಎರಡರಲ್ಲಿ ಗೆದ್ದಿದೆ. ಹೋದ ಪಂದ್ಯದಲ್ಲಿ ತ್ರಿಪುರ ಎದುರು ದೇವದತ್ತ ಪಡಿಕ್ಕಲ್ 99 ರನ್ ಗಳಿಸಿದ್ದರು. ಅವರೊಂದಿಗೆ ಇನಿಂಗ್ಸ್‌ ಆರಂಭಿಸಿದ್ದ ರೋಹನ್ ಕದಂ ಭರವಸೆಯ ಆಟವಾಡಿದ್ದರು.

ಆದರೆ, ಕರುಣ್ ನಾಯರ್ ಸೇರಿದಂತೆ ಉಳಿದ ಬ್ಯಾಟ್ಸ್‌ಮನ್‌ಗಳು ಲಯ ಕಂಡುಕೊಳ್ಳುವ ಒತ್ತಡದಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಮಿಂಚಿದ್ದ ಕೆ.ಎಲ್. ಶ್ರೀಜಿತ್ ನಂತರ ಮಂಕಾಗಿದ್ದಾರೆ. ಉಪನಾಯಕ ಪವನ್ ದೇಶಪಾಂಡೆ ಬ್ಯಾಟಿಂಗ್ ಕೂಡ ಮೊದಲಿನಂತಿಲ್ಲ. ಬೌಲಿಂಗ್‌ನಲ್ಲಿ ಸ್ವಲ್ಪ ಪರವಾಗಿಲ್ಲ ಎನ್ನುವ ಸ್ಥಿತಿಯಿದೆ. ಅನುಭವಿ ಮಿಥುನ್, ಪ್ರಸಿದ್ಧ ಕೃಷ್ಣ ಮತ್ತು ಸ್ಪಿನ್ನರ್ ಕೆ. ಗೌತಮ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಶ್ರೇಯಸ್ ಗೋಪಾಲ್ ಲಯಕ್ಕೆ ಮರಳಬೇಕಿದೆ.

ADVERTISEMENT

ಗೆಲುವಿನ ಜೊತೆಗೆ ಉತ್ತಮ ರನ್‌ ಸರಾಸರಿಯನ್ನು ಗಳಿಸುವ ಒತ್ತಡ ಕರ್ನಾಟಕಕ್ಕೆ ಇದೆ. ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ತಂಡವು ಎಂಟು ಪಾಯಿಂಟ್ಸ್‌ನೊಂದಿಗೆ ಮೂರನೇ ಸ್ಥಾನದಲ್ಲಿದೆ. ಆದರೆ ಅಷ್ಟೇ ಅಂಕ ಹೊಂದಿರುವ, ಆದರೆ ರನ್‌ರೇಟ್‌ ಹೆಚ್ಚಿರುವ ಜಮ್ಮು–ಕಾಶ್ಮೀರ ತಂಡವು ಎರಡನೇ ಸ್ಥಾನದಲ್ಲಿದೆ. ಒಂದೂ ಪಂದ್ಯ ಸೋಲದ ಪಂಜಾಬ್ ಅಗ್ರಸ್ಥಾನದಲ್ಲಿದೆ.

ಎಂಟು ಪಾಯಿಂಟ್ಸ್‌ ಇರುವ ರೈಲ್ವೆ ತಂಡವು ನಾಲ್ಕನೇ ಸ್ಥಾನದಲ್ಲಿದೆ. ದಿನೇಶ್ ಮೋರ್ ನಾಯಕತ್ವದ ತಂಡವು ಎರಡು ಪಂದ್ಯಗಳನ್ನು ಗೆದ್ದಿದೆ. ಈ ಬಳಗದಲ್ಲಿರುವ ಕನ್ನಡಿಗ ಟಿ. ಪ್ರದೀಪ್ ಕರ್ನಾಟಕ ತಂಡದ ತನ್ನ ಸ್ನೇಹಿತರಿಗೆ ’ಸ್ವಿಂಗ್ ಬೌಲಿಂಗ್‘ ರುಚಿ ತೋರಿಸಲು ಸಿದ್ಧರಾಗಿದ್ದಾರೆ.

ತಂಡಗಳು: ಕರ್ನಾಟಕ: ಕರುಣ್ ನಾಯರ್ (ನಾಯಕ), ಕೆ.ಎಲ್.ಶ್ರೀಜಿತ್ (ವಿಕೆಟ್‌ಕೀಪರ್), ರೋಹನ್ ಕದಂ, ದೇವದತ್ತ ಪಡಿಕ್ಕಲ್, ಅಭಿಮನ್ಯು ಮಿಥುನ್, ಅನಿರುದ್ಧ ಜೋಶಿ, ಕೃಷ್ಣಪ್ಪ ಗೌತಮ್, ಪ್ರಸಿದ್ಧ ಕೃಷ್ಣ, ಶ್ರೇಯಸ್ ಗೋಪಾಲ್, ವಿ. ಕೌಶಿಕ್, ಪ್ರವೀಣ್ ದುಬೆ, ರೋನಿತ್ ಮೋರೆ, ಜೆ. ಸುಚಿತ್, ಪವನ್ ದೇಶಪಾಂಡೆ, ಪ್ರತೀಕ್ ಜೈನ್, ಬಿ.ಆರ್. ಶರತ್, ಕೆ.ವಿ.ಸಿದ್ಧಾರ್ಥ್, ಎಂ.ಬಿ. ದರ್ಶನ್, ಮನೋಜ್ ಬಾಂಢಗೆ, ಶುಭಾಂಗ್ ಹೆಗಡೆ

ರೈಲ್ವೆಸ್: ದಿನೇಶ್ ಮೋರ್ (ನಾಯಕ–ವಿಕೆಟ್‌ಕೀಪರ್), ಮೃಣಾಲ್ ದೇವಧರ್, ಪ್ರಥಮ್ ಸಿಂಗ್, ಶಿವಂ ಚೌಧರಿ, ನವನೀತ್ ವಿಂಕ್, ವಿನೀತ್ ಢಾಕಾ, ಹರ್ಷ ತ್ಯಾಗಿ, ದೃಶಂತ್ ಸೋನಿ, ಪ್ರದೀಪ್ ಪೂಜಾರ, ಕನಿಷ್ಕ್ ಸೇತ್, ಅಭಿಷೇಕ್ ಪಾಂಡೆ, ಕರ್ಣ ಶರ್ಮಾ, ಟಿ. ಪ್ರದೀಪ್, ಶಿವೇಂದ್ರ ಸಿಂಗ್, ಅಮಿತ್ ಕುಯಲಾ, ಸೌರಭ್ ಸಿಂಗ್, ವಿಕ್ರಾಂತ್ ರಜಪೂತ್, ಹಿಮಾಂಶು ಸಂಗ್ವಾನ್, ಅನಂತ್ ಸಹಾ.

ಎ ಗುಂಪಿನ ಪಂದ್ಯಗಳು: ಜಮ್ಮು–ಕಾಶ್ಮೀರ ವಿರುದ್ಧ ಪಂಜಾಬ್; ಉತ್ತರ ಪ್ರದೇಶ ವಿರುದ್ಧ ತ್ರಿಪುರ

ಪಂದ್ಯ ಆರಂಭ: ಮಧ್ಯಾಹ್ನ 12

ಸ್ಥಳ: ಕೆಎಸ್‌ಸಿಎ ಕ್ರೀಡಾಂಗಣ, ಆಲೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.