ADVERTISEMENT

ಸೂರತ್‌ನಲ್ಲಿ ಪ್ರಜ್ವಲಿಸಿದ ‘ಸೂರ್ಯ’

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಕ್ರಿಕೆಟ್‌: ಮುಂಬೈಗೆ ಮಣಿದ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 19:34 IST
Last Updated 25 ನವೆಂಬರ್ 2019, 19:34 IST
ಸೂರ್ಯಕುಮಾರ್‌ ಯಾದವ್‌
ಸೂರ್ಯಕುಮಾರ್‌ ಯಾದವ್‌   

ಸೂರತ್‌ (ಪಿಟಿಐ): ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ಇಲ್ಲಿನ ಸಿ.ಬಿ.ಪಟೇಲ್‌ ಮೈದಾನದಲ್ಲಿ ಸೋಮವಾರ ಪ್ರಜ್ವಲಿಸಿದರು.

ಸ್ಫೋಟಕ ಅರ್ಧಶತಕ (ಔಟಾಗದೆ 94; 53ಎ, 11ಬೌಂ, 4ಸಿ) ಸಿಡಿಸಿದ ಅವರು ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಕರ್ನಾಟಕ ವಿರುದ್ಧದ ಸೂಪರ್‌ ಲೀಗ್‌ ಪೈಪೋಟಿಯಲ್ಲಿ ಮುಂಬೈ ತಂಡಕ್ಕೆ ಗೆಲುವಿನ ಸಿಹಿ ಉಣಬಡಿಸಿದರು.

ಈ ಬಾರಿ ಸೂಪರ್‌ ಲೀಗ್‌ ಹಂತದಲ್ಲಿ ಕರ್ನಾಟಕ ಸೋತ ಮೊದಲ ಪಂದ್ಯ ಇದಾಗಿದೆ. ಹಿಂದಿನ ಮೂರು ಪಂದ್ಯಗಳಲ್ಲೂ ಮನೀಷ್‌ ಪಾಂಡೆ ಬಳಗ ಗೆದ್ದಿತ್ತು.

ADVERTISEMENT

ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಮನೀಷ್‌ ಪಡೆ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 171ರನ್‌ ಕಲೆಹಾಕಿತು.

ಸವಾಲಿನ ಗುರಿಯನ್ನು ಮುಂಬೈ ತಂಡ ಆರು ಎಸೆತಗಳು ಬಾಕಿ ಇರುವಂತೆ ಮೂರು ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಆರಂಭಿಕ ಸಂಕಷ್ಟ: ಇನಿಂಗ್ಸ್‌ ಆರಂಭಿಸಿದ ಹಾಲಿ ಚಾಂಪಿಯನ್‌ ಕರ್ನಾಟಕ ತಂಡ ಖಾತೆ ತೆರೆಯುವ ಮುನ್ನವೇ ವಿಕೆಟ್‌ ಕಳೆದುಕೊಂಡಿತು.

ಮುಂಬೈ ನಾಯಕ ಸೂರ್ಯಕುಮಾರ್‌ ಅವರು ಮೊದಲ ಓವರ್‌ ಬೌಲ್‌ ಮಾಡಲು ಎಡಗೈ ಸ್ಪಿನ್ನರ್‌ ಶಂಷ್‌ ಮುಲಾನಿಗೆ ಚೆಂಡು ನೀಡಿದ್ದು ಫಲ ನೀಡಿತು.

ಎರಡನೆ ಎಸೆತದಲ್ಲೇ ಆರಂಭಿಕ ಆಟಗಾರ ಕೆ.ಎಲ್.ರಾಹುಲ್‌ಗೆ (0) ಪೆವಿಲಿಯನ್‌ ದಾರಿ ತೋರಿಸಿದ ಮುಲಾನಿ, ಸಂಭ್ರಮಿಸಿದರು.

ಇದರ ಬೆನ್ನಲ್ಲೇ ಮನೀಷ್‌ (4) ಮತ್ತು ಕರುಣ್‌ ನಾಯರ್‌ (8) ಔಟಾದರು. ಆಗ ಕರ್ನಾಟಕದ ಖಾತೆಯಲ್ಲಿದ್ದದ್ದು ಕೇವಲ 19ರನ್‌.

ಜೀವ ತುಂಬಿದ ಜೊತೆಯಾಟ: ಪ್ರಮುಖ ಮೂರು ಮಂದಿ ಬ್ಯಾಟ್ಸ್‌ಮನ್‌ಗಳು ಬೇಗನೆ ಪೆವಿಲಿಯನ್‌ ಸೇರಿದ್ದರಿಂದ ಕರ್ನಾಟಕದ ಮೇಲೆ ಆತಂಕದ ಕಾರ್ಮೋಡ ಕವಿದಿತ್ತು. ಇದನ್ನು ದೇವದತ್ತ ಪಡಿಕ್ಕಲ್‌ (57; 34ಎ, 4ಬೌಂ, 4ಸಿ) ಮತ್ತು ರೋಹನ್‌ ಕದಂ (71; 47ಎ, 7ಬೌಂ, 3ಸಿ) ದೂರ ಸರಿಸಿದರು.

ಮೈದಾನದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದ ಈ ಜೋಡಿ ಕಳೆಗುಂದಿದ್ದ ಕರ್ನಾಟಕದ ಇನಿಂಗ್ಸ್‌ಗೆ ರಂಗು ತುಂಬಿತು.

ಇವರು ನಾಲ್ಕನೇ ವಿಕೆಟ್‌ ಪಾಲುದಾರಿಕೆಯಲ್ಲಿ 80ರನ್‌ ಕಲೆಹಾಕಿ ತಂಡದ ಮೊತ್ತವನ್ನು ಶತಕದ ಸನಿಹಕ್ಕೆ ತಂದು ನಿಲ್ಲಿಸಿದರು. 14ನೇ ಓವರ್‌ನಲ್ಲಿ ದಾಳಿಗಿಳಿದ ಶಿವಂ ದುಬೆ, ಈ ಜೊತೆಯಾಟ ಮುರಿಯುವಲ್ಲಿ ಯಶಸ್ವಿಯಾದರು. ಎರಡನೇ ಎಸೆತದಲ್ಲಿ ಅವರು ದೇವದತ್ತ ವಿಕೆಟ್‌ ಕಬಳಿಸಿದರು.

ನಂತರ ರೋಹನ್‌ ಮತ್ತು ಪವನ್‌ ದೇಶಪಾಂಡೆ (13; 8ಎ, 2ಬೌಂ) ಬಿರುಸಿನ ಆಟ ಆಡಿ ತಂಡ ಸವಾಲಿನ ಮೊತ್ತ ಪೇರಿಸಲು ನೆರವಾದರು.

ಉತ್ತಮ ಆರಂಭ: ಗುರಿ ಬೆನ್ನಟ್ಟಿದ ಮುಂಬೈ ತಂಡ ಉತ್ತಮ ಆರಂಭ ಪಡೆಯಿತು. ಪೃಥ್ವಿ ಶಾ (30; 17ಎ, 3ಬೌಂ, 2ಸಿ) ಮತ್ತು ಆದಿತ್ಯ ತಾರೆ (12; 6ಎ, 3ಬೌಂ) ಶುರುವಿನಲ್ಲೇ ಎದುರಾಳಿ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದರು.

ಇವರಿಬ್ಬರು ಔಟಾದ ನಂತರ ಸೂರ್ಯಕುಮಾರ್‌ ಆಟ ಕಳೆಗಟ್ಟಿತು.

ಶ್ರೇಯಸ್‌ ಅಯ್ಯರ್‌ (14; 20ಎ, 1ಬೌಂ) ಜೊತೆ ಮೂರನೇ ವಿಕೆಟ್‌ಗೆ 46ರನ್‌ ಸೇರಿಸಿದ ಅವರು ಬಳಿಕ ಶಿವಂ ದುಬೆ (ಔಟಾಗದೆ 22; 18ಎ, 2ಸಿ) ಅವರೊಂದಿಗೆ ಮತ್ತೊಂದು ಸುಂದರ ಇನಿಂಗ್ಸ್‌ ಕಟ್ಟಿದರು.

ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ 84ರನ್‌ ಕಲೆಹಾಕಿ ಮುಂಬೈ ಆಟಗಾರರ ಮೊಗದಲ್ಲಿ ಮಂದಹಾಸ ಮೂಡಿಸಿತು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ; 20 ಓವರ್‌ಗಳಲ್ಲಿ 6 ವಿಕೆಟ್‌ಗೆ 171 (ದೇವದತ್ತ ಪಡಿಕ್ಕಲ್‌ 57, ರೋಹನ್‌ ಕದಂ 71, ಪವನ್‌ ದೇಶಪಾಂಡೆ 13, ಕೃಷ್ಣಪ್ಪ ಗೌತಮ್‌ ಔಟಾಗದೆ 8; ಶಂಷ್‌ ಮುಲಾನಿ 8ಕ್ಕೆ1, ಶಾರ್ದೂಲ್‌ ಠಾಕೂರ್‌ 29ಕ್ಕೆ2, ಶಿವಂ ದುಬೆ 39ಕ್ಕೆ2).

ಮುಂಬೈ: 19 ಓವರ್‌ಗಳಲ್ಲಿ 3 ವಿಕೆಟ್‌ಗೆ 174 (ಪೃಥ್ವಿ ಶಾ 30, ಆದಿತ್ಯ ತಾರೆ 12, ಶ್ರೇಯಸ್‌ ಅಯ್ಯರ್‌ 14, ಸೂರ್ಯಕುಮಾರ್‌ ಯಾದವ್‌ ಔಟಾಗದೆ 94, ಶಿವಂ ದುಬೆ ಔಟಾಗದೆ 22; ರೋನಿತ್‌ ಮೋರೆ 41ಕ್ಕೆ1, ಪ್ರವೀಣ್‌ ದುಬೆ 32ಕ್ಕೆ1, ಶ್ರೇಯಸ್‌ ಗೋಪಾಲ್‌ 19ಕ್ಕೆ1).

ಫಲಿತಾಂಶ: ಮುಂಬೈ ತಂಡಕ್ಕೆ 7 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.