ADVERTISEMENT

ಅಂಗವಿಕಲರ ರಾಷ್ಟ್ರಮಟ್ಟದ ಟಿ20 ಕ್ರಿಕೆಟ್ : ಸದರ್ನ್ ಸ್ಮ್ಯಾಷರ್ಸ್ ಚಾಂಪಿಯನ್‌

ಅಂಗವಿಕಲರ ರಾಷ್ಟ್ರಮಟ್ಟದ ಟ್ವೆಂಟಿ–20 ಕ್ರಿಕೆಟ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 4:14 IST
Last Updated 4 ಏಪ್ರಿಲ್ 2024, 4:14 IST
ಅಜಿತ್‌ ವಾಡೇಕರ್ ಸ್ಮರಣಾರ್ಥ ಹುಬ್ಬಳ್ಳಿಯಲ್ಲಿ ನಡೆದ ಅಂಗವಿಕಲರ ರಾಷ್ಟ್ರಮಟ್ಟದ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್‌ ಆದ ಸದರ್ನ್‌ ಸ್ಮ್ಯಾಷರ್ಸ್ ತಂಡದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು
–ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಅಜಿತ್‌ ವಾಡೇಕರ್ ಸ್ಮರಣಾರ್ಥ ಹುಬ್ಬಳ್ಳಿಯಲ್ಲಿ ನಡೆದ ಅಂಗವಿಕಲರ ರಾಷ್ಟ್ರಮಟ್ಟದ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್‌ ಆದ ಸದರ್ನ್‌ ಸ್ಮ್ಯಾಷರ್ಸ್ ತಂಡದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ   

ಹುಬ್ಬಳ್ಳಿ: ರಾಜೇಶ್‌ ಕಣ್ಣೂರ್‌ (67) ಮತ್ತು ನರೇಂದ್ರ ಮಂಗೋರೆ (ಅಜೇಯ 59; 22ಎ, 4X3, 6X7) ಅವರ ಅರ್ಧಶತಕಗಳ ನೆರವಿನಿಂದ ಸದರ್ನ್ ಸ್ಮ್ಯಾಷರ್ಸ್‌ ತಂಡವು ಅಜಿತ್‌ ವಾಡೇಕರ್ ಸ್ಮರಣಾರ್ಥ ನಡೆದ ಅಂಗವಿಕಲರ ರಾಷ್ಟ್ರಮಟ್ಟದ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.

ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಫೈನಲ್‌ ಪಂದ್ಯದಲ್ಲಿ ಸದರ್ನ್ ಸ್ಮ್ಯಾಷರ್ಸ್ ತಂಡ ವೆಸ್ಟರ್ನ್‌ ರೇಂಜರ್ಸ್ ತಂಡವನ್ನು 60 ರನ್‌ಗಳಿಂದ ಮಣಿಸಿತು. 197 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ರೇಂಜರ್ಸ್‌ ತಂಡಕ್ಕೆ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 137 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

ರೇಂಜರ್ಸ್‌ ಪರ ತಂಡದ ನಾಯಕ ಕುನಾಲ್ ಫನಾಸೆ 46 (32ಎ, 4X8) ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳಿಂದ ಉತ್ತಮ ಆಟ ಮೂಡಿಬರಲಿಲ್ಲ. 

ADVERTISEMENT

ಇದಕ್ಕೂ ಮುನ್ನ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಸ್ಮ್ಯಾಷರ್ಸ್‌ಗೆ ನಯನ್‌ ಶಿಂದೆ ಮತ್ತು ರಾಜೇಶ್ ಕಣ್ಣೂರ್‌ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 120 ರನ್ ಸೇರಿಸಿತು.

ರಾಜೇಶ್‌ ಅವರು ಗಣೇಶ ನವಘಾನೆ ಬೌಲಿಂಗ್‌ನಲ್ಲಿ ರಾಜೇಶ್‌ ಸುರ್ವೆಗೆ ಕ್ಯಾಚಿತ್ತರು. ಅವರು 8 ಬೌಂಡರಿ, 3 ಸಿಕ್ಸರ್‌ ಬಾರಿಸಿದರು. ಅರ್ಧಶತಕದ ಹೊಸ್ತಿಲಲ್ಲಿದ್ದ ನಯನ್ ಶಿಂಧೆ (49) ರನ್‌ಔಟ್‌ ಆದರು.

ಈ ಹಂತದಲ್ಲಿ ಜತೆಯಾದ ನರೇಂದ್ರ ಮಂಗೋರೆ ಮತ್ತು ಎಂ.ಸುಗಣೇಶ್‌ ಜೋಡಿ 33 ಎಸೆತಗಳಲ್ಲಿ 73 ರನ್ ಗಳಿಸಿ ತಂಡದ ಮೊತ್ತ ಹಿಗ್ಗಿಸಿತು. ಬಿರುಸಿನ ಆಟವಾಡಿದ ನರೇಂದ್ರ 21 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಅವರು ಸತತ ನಾಲ್ಕು ಸಿಕ್ಸರ್‌ ಸಿಡಿಸಿ ಮಿಂಚಿದರು.

ಅರ್ಧಶತಕ ಗಳಿಸಿದ ಸದರ್ನ್‌ ಸ್ಮ್ಯಾಷರ್ಸ್ ತಂಡದ ರಾಜೇಶ್‌ ಕಣ್ಣೂರ್‌

ಸಂಕ್ಷಿ‍ಪ್ತ ಸ್ಕೋರು:

ಸದರ್ನ್‌ ಸ್ಮ್ಯಾಷರ್ಸ್‌: 20 ಓವರ್‌ಗಳಲ್ಲಿ 2ಕ್ಕೆ 197 (ರಾಜೇಶ್ ಕಣ್ಣೂರ್‌ 67, ನರೇಂದ್ರ ಮಂಗೋರೆ 59, ನಯನ್ ಶಿಂಧೆ 49; ಗಣೇಶ ನವಘಾನೆ 28ಕ್ಕೆ 1). ವೆಸ್ಟರ್ನ್ ರೇಂಜರ್ಸ್‌: 20 ಓವರ್‌ಗಳಲ್ಲಿ 7ಕ್ಕೆ 137 (ಕುನಾಲ್‌ ಫನಾಸೆ 46, ಅತುಲ್ ಸುರ್ವೆ 26, ಸತೀಶ ರಾಠೋಡ್‌ 15; ರಮೇಶ ನಾಯ್ಡು 11ಕ್ಕೆ 2, ಕೃಷ್ಣ ಬಗಾದಿ 15ಕ್ಕೆ 2, ವಿ.ಎನ್.ಜಿತೇಂದ್ರ 19ಕ್ಕೆ 1). ಫಲಿತಾಂಶ: ಸದರ್ನ್ ಸ್ಮ್ಯಾಷರ್ಷ್‌ಗೆ 60 ರನ್‌ಗಳ ಜಯ. ಪಂದ್ಯಶ್ರೇಷ್ಠ: ನರೇಂದ್ರ ಮಂಗೋರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.