ADVERTISEMENT

T20 World Cup: ಇಂಗ್ಲೆಂಡ್ ತಂಡದ ಎಡಗೈ ವೇಗಿ ಸ್ಯಾಮ್ ಕರನ್ ಶ್ರೇಷ್ಠ ಆಟಗಾರ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 16:16 IST
Last Updated 13 ನವೆಂಬರ್ 2022, 16:16 IST
ಸ್ಯಾಮ್ ಕರನ್ 
ಸ್ಯಾಮ್ ಕರನ್    

ಮೆಲ್ಬರ್ನ್ (ಪಿಟಿಐ): ಇಂಗ್ಲೆಂಡ್ ತಂಡದ ಎಡಗೈ ವೇಗಿ ಸ್ಯಾಮ್ ಕರನ್ ಟಿ20 ವಿಶ್ವಕಪ್ ಟೂರ್ನಿಯ ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾಗಿದ್ದಾರೆ.

ಈ ವರ್ಷದ ಆರಂಭದಲ್ಲಿ ಗಂಭೀರ ಗಾಯದಿಂದ ಚೇತರಿಸಿಕೊಂಡು ಕ್ರಿಕೆಟ್ ಮರಳಿದ್ದರು. ಟೂರ್ನಿಯಲ್ಲಿ ಒಟ್ಟು 13 ವಿಕೆಟ್‌ಗಳನ್ನು ಅವರು ಗಳಿಸಿದ್ದಾರೆ. ಫೈನಲ್‌ ಪಂದ್ಯದಲ್ಲಿ ಅವರು ಮೂರು ವಿಕೆಟ್ ಗಳಿಸಿದರು.

‘ಎಂ.ಸಿ.ಜಿಯ ಸ್ಕ್ವೇರ್‌ ಬೌಂಡರಿಲೈನ್‌ ದೊಡ್ಡ ಅಂತರಹೊಂದಿವೆ. ಈ ಕ್ರೀಡಾಂಗಣ ಹಾಗೂ ಪಿಚ್‌ಗೆ ತಕ್ಕಂತೆ ಬೌಲಿಂಗ್ ಮಾಡಲು ಬಹಳಷ್ಟು ಅಭ್ಯಾಸ ಬೇಕು. ಇದೊಂದು ಕಠಿಣ ಸವಾಲಾಗಿತ್ತು. ನಿಧಾನಗತಿಯ ಎಸೆತಗಳ ಮೂಲಕ ಬ್ಯಾಟರ್‌ಗಳಲ್ಲಿ ಗೊಂದಲ ಮೂಡಿಸುವಲ್ಲಿ ಸಫಲನಾದೆ’ ಎಂದು ಸ್ಯಾಮ್ ಹೇಳಿದರು.

ADVERTISEMENT

‘ಬೆನ್ ಸ್ಟೋಕ್ಸ್‌ ಜೊತೆಗೆ ಆಡುತ್ತಿರುವುದು ನನ್ನ ಅದೃಷ್ಟ. ತಂಡದ ಗೆಲುವಿಗೆ ಸ್ಟೋಕ್ಸ್‌ ಕೊಡುವ ಕಾಣಿಕೆ ಬಹಳ ದೊಡ್ಡದು’ ಎಂದು ಶ್ಲಾಘಿಸಿದರು.

ಸೋಲಿನ ಲಗೇಜ್ ಹೊರಲಾಗದು

ಯಾವುದೇ ಸೋಲಿನ ಭಾರವನ್ನು ಹೆಚ್ಚು ಸಮಯ ಹೊರಲು ಸಾಧ್ಯವಿಲ್ಲ. ಆ ನಿರಾಶೆಯಿಂದ ಕಲಿತ ಪಾಠದ ಮೂಲಕ ದೊಡ್ಡ ಗೆಲುವು ಸಾಧಿಸಿದಾಗಲೇ ಸಂತೃಪ್ತಿ ಭಾವ ಎಂದು ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ ಹೇಳಿದ್ದಾರೆ.

ವಿಶ್ವಕಪ್ ಟೂರ್ನಿಯ ಗುಂಪು ಹಂತದಲ್ಲಿ ಐರ್ಲೆಂಡ್ ವಿರುದ್ಧದ ಸೋಲಿನಿಂದ ಕಲಿತ ಪಾಠದ ಕುರಿತು ಅವರು ಸುದ್ದಿಗಾರರೊಂದಿಗೆ ಹಂಚಿಕೊಂಡರು.

‘ಆ ಸೋಲಿನಿಂದಾಗಿ ನಮ್ಮ ತಂಡವು ಟೂರ್ನಿಯಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ ಇತ್ತು. ತುರ್ತಾಗಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿತ್ತು. ಇಂತಹ ಟೂರ್ನಿಗಳಲ್ಲಿ ಸೋಲಿನ ಭಾರವನ್ನು ಬಹಳಷ್ಟು ಸಮಯ ಹೆಗಲಮೇಲೆ ಹೊರಲಾಗದು. ಆದಷ್ಟು ಬೇಗ ಇಳಿಸಿಬಿಟ್ಟರೆ ಮುಂದಿನ ದಾರಿ ಸುಗಮ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.