ನವದೆಹಲಿ: 'ನನಗೆ ಈಗಲೂ ಭಾರತ ಟಿ20 ಕ್ರಿಕೆಟ್ ತಂಡಕ್ಕೆ ಮರಳುವ ವಿಶ್ವಾಸವಿದೆ. ಮುಂದಿನ ಟಿ20 ಕ್ರಿಕೆಟ್ ವಿಶ್ವಕಪ್ ಆಡುವತ್ತ ನನ್ನ ಚಿತ್ತವಿದೆ. ಆದರೆ ಸದ್ಯ ನಾನು ಈಗ ಆಡುವ ರೀತಿಯನ್ನು ಮುಂದುವರಿಸುತ್ತೇನೆ. ಅದನ್ನೇ ಆನಂದಿಸುತ್ತೇನೆ’ ಎಂದು ಅನುಭವಿ ಬ್ಯಾಟರ್ ಕೆ.ಎಲ್. ರಾಹುಲ್ ಹೇಳಿದ್ದಾರೆ.
ಹಾಲಿ ಚಾಂಪಿಯನ್ ಭಾರತವೇ ಮುಂದಿನ ವರ್ಷ ಟಿ20 ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಲಿದೆ. ರಾಹುಲ್ ಅವರು ಮೂರು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದರು. ಆ ಟೂರ್ನಿಯಲ್ಲಿ ಭಾರತ ತಂಡವು ಸೆಮಿಫೈನಲ್‌ನಲ್ಲಿ ಸೋತಿತ್ತು.
ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಹುಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಅವರು 13 ಪಂದ್ಯಗಳಿಂದ 539 ರನ್ ಪೇರಿಸಿದ್ದಾರೆ. ಅದರಲ್ಲಿ ಒಂದು ಅಮೋಘ ಶತಕವೂ ಸೇರಿದೆ. ಅಲ್ಲದೇ ಸತತ ಐದನೇ ಆವೃತ್ತಿಯಲ್ಲಿ ಅವರು 500ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ ದಾಖಲೆಯನ್ನೂ ಮಾಡಿದ್ದಾರೆ.
'ಕಳೆದ ಕೆಲವು ವರ್ಷಗಳಿಂದ ನಾನು ಭಾರತ ಟಿ20 ತಂಡದಲ್ಲಿ ಆಡಿಲ್ಲ. ಈ ಅವಧಿಯಲ್ಲಿ ನಾನು ಯಾವ ಹಂತಗಳಲ್ಲಿ ಸುಧಾರಣೆ ಮಾಡಿಕೊಳ್ಳಬೇಕು ಮತ್ತು ಹೆಚ್ಚು ಉತ್ತಮವಾಗಿ ಆಡಬೇಕು ಎಂಬುದರ ಬಗ್ಗೆ ಯೋಚಿಸಲು ಅವಕಾಶ ದೊರೆಯಿತು. ಆ ಪ್ರಕಾರ ನಾನು ಮುಂದುವರಿಯುವೆ’ ಎಂದು ಕನ್ನಡಿಗ ರಾಹುಲ್ ಅವರು ಸ್ಕೈ ಸ್ಪೋರ್ಟ್ಸ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.