ADVERTISEMENT

ಟಿ20 ಕ್ರಿಕೆಟ್: ಟಿಕೆಟ್‌ ಸೋಲ್ಡ್‌ ಔಟ್!

27ರಂದು ಭಾರತ– ಆಸ್ಟ್ರೇಲಿಯಾ ನಡುವಣ ಚುಟುಕು ಪಂದ್ಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 19:27 IST
Last Updated 19 ಫೆಬ್ರುವರಿ 2019, 19:27 IST
   

ಬೆಂಗಳೂರು: ಉದ್ಯಾನ ನಗರಿಯಲ್ಲಿ ಬಿಸಿಲಿನ ಕಾವಿನ ಜೊತೆಗೆ ಕ್ರಿಕೆಟ್‌ ಜ್ವರವೂ ಮೆಲ್ಲಗೆ ಏರುತ್ತಿದೆ. ಇದೇ 27ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಣ ಟ್ವೆಂಟಿ–20 ಪಂದ್ಯದ ಎಲ್ಲ ಟಿಕೆಟ್‌ಗಳೂ ಮಾರಾಟವಾಗಿವೆ.

ಫೆಬ್ರುವರಿ 16ರಿಂದ ಆನ್‌ಲೈನ್‌ನಲ್ಲಿ ಮಾರಾಟ ಆರಂಭವಾಗಿತ್ತು. ಮಂಗಳವಾರ ಬೆಳಿಗ್ಗೆ ಕ್ರೀಡಾಂಗಣದ ಕೌಂಟರ್‌ನಲ್ಲಿ ಆರಂಭವಾಗಿ ಮೂರು ತಾಸುಗಳಳೊಳಗೆ ಎಲ್ಲ ಟಿಕೆಟ್‌ಗಳೂ ಖರ್ಚಾದವು.

ಬೆಳಗಿನ ಜಾವದಲ್ಲಿಯೇ ಕೌಂಟರ್‌ ಮುಂದೆ ಜನರು ಸಾಲುಗಟ್ಟಿದ್ದರು. ಅದರಲ್ಲಿ ಕಾಲೇಜು ವಿದ್ಯಾರ್ಥಿಗಳು, ಕಂಕುಳಲ್ಲಿ ಕಂದಮ್ಮಗಳನ್ನು ಎತ್ತುಕೊಂಡ ಅಮ್ಮಂದಿರು, ವಯೋವೃದ್ಧರು, ಮಹಿಳೆಯರು ಇದ್ದರು. ವಿಶೇಷವೆಂದರೆ ಭದ್ರತೆ ನೀಡುತ್ತಿದ್ದ ಪೊಲೀಸರೂ ಈ ವಿಷಯದಲ್ಲಿ ಹಿಂದೆ ಬೀಳಲಿಲ್ಲ. ತಾವೂ ಟಿಕೆಟ್‌ ಖರೀದಿಸಿದರು!

ADVERTISEMENT

‘ಮಾರಾಟಕ್ಕೆ ಇಡಲಾಗಿದ್ದ ಎಲ್ಲ ಟಿಕೆಟ್‌ಗಳೂ ಬಿಕರಿಯಾಗಿವೆ.ಫೆ. 16ರಿಂದ ಆನ್‌ಲೈನ್‌ನಲ್ಲಿ ಮತ್ತು ಕೌಂಟರ್‌ನಲ್ಲಿ ಸೇರಿ ಒಟ್ಟು 12 ಸಾವಿರ ಟಿಕೆಟ್‌ಗಳು ಮಾರಾಟವಾಗಿದೆ. ಅದರಲ್ಲಿ ಮಂಗಳವಾರ ಕೌಂಟರ್‌ನಲ್ಲಿ ಎಲ್ಲ ಏಳು ಸಾವಿರ ಟಿಕೆಟ್‌ಗಳೂ ಖರ್ಚಾಗಿವೆ. ಕೌಂಟರ್‌ನಲ್ಲಿ ₹ 750 ರೂಪಾಯಿ ಬೆಲೆ ಟಿಕೆಟ್‌ಗಳನ್ನು ಒಬ್ಬರಿಗೆ ಒಂದು ಮಾತ್ರ ಕೊಡಲಾಗಿದೆ.

ಹೆಚ್ಚಿನ ಬೆಲೆಯ ಟಿಕೆಟ್‌ಗಳನ್ನು ತಲಾ ಎರಡು ನೀಡಲಾಗಿದೆ. ಮೈದಾನದ ಪ್ರೇಕ್ಷಕರ ಗ್ಯಾಲರಿಯ ಸಾಮರ್ಥ್ಯದ 32 ಸಾವಿರ ಟಿಕೆಟ್‌ಗಳಲ್ಲಿ 12 ಸಾವಿರ ಸಾರ್ವಜನಿಕರಿಗೆ, ನಮ್ಮ ಸಂಸ್ಥೆಯ ಮಾನ್ಯತೆ ಪಡೆದ ಕ್ಲಬ್ ಮತ್ತು ಕ್ರಿಕೆಟಿಗರಿಗೆ ಐದು ಸಾವಿರ ಮತ್ತು ಸದಸ್ಯರಿಗೆ ಐದು ಸಾವಿರ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಇನ್ನುಳಿದ ಹತ್ತು ಸಾವಿರ ಟಿಕೆಟ್‌ಗಳಲ್ಲಿ ಆರು
ಸಾವಿರ ಸದಸ್ಯರಿಗೆ, ಮೂರು ಸಾವಿರ ಸರ್ಕಾರಿ ಇಲಾಖೆಗಳಿಗೆ ಮತ್ತು ಒಂದು ಸಾವಿರ ಬಿಸಿಸಿಐ ಪದಾಧಿಕಾರಿಗಳು ಸದಸ್ಯರಿಗೆ ನೀಡಲಾಗುತ್ತದೆ’ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.