ADVERTISEMENT

ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ: ತಮಿಳುನಾಡು ತಂಡಕ್ಕೆ ಕಿರೀಟ

ಮಣಿಮಾರನ್‌ ಸಿದ್ಧಾರ್ಥ್ ಕೈಚಳಕ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 20:09 IST
Last Updated 31 ಜನವರಿ 2021, 20:09 IST
ಮಣಿಮಾರನ್ ಸಿದ್ಧಾರ್ಥ್‌– ಟ್ವಿಟರ್ ಚಿತ್ರ
ಮಣಿಮಾರನ್ ಸಿದ್ಧಾರ್ಥ್‌– ಟ್ವಿಟರ್ ಚಿತ್ರ   

ಅಹಮದಾಬಾದ್: ಸ್ಪಿನ್ನರ್ ಮಣಿ ಮಾರನ್ ಸಿದ್ಧಾರ್ಥ್‌ ಮೋಡಿಯ ಬಲದಿಂದ ತಮಿಳುನಾಡು ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದುಕೊಂಡಿತು.

ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ದೇಶಿ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ನಾಯಕತ್ವದ ತಮಿಳುನಾಡು ತಂಡವು ಬರೋಡಾ ಎದುರು 7 ವಿಕೆಟ್‌ಗಳಿಂದ ಜಯಿಸಿತು.

ಟಾಸ್ ಗೆದ್ದ ತಮಿಳುನಾಡು ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸಿದ್ಧಾರ್ಥ್ (20ಕ್ಕೆ4) ಬೌಲಿಂಗ್‌ಗೆ ನಡುಗಿದ ಬರೋಡಾ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 120 ರನ್‌ ಗಳಿಸಿತು. ಅದಕ್ಕುತ್ತರವಾಗಿ ತಮಿಳುನಾಡು ತಂಡವು 18 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 123 ರನ್‌ ಗಳಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಹರಿ ನಿಶಾಂತ್ (35 ರನ್) ಮತ್ತು ಬಾಬಾ ಅಪರಾಜಿತ್ (ಔಟಾಗದೆ 29) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ADVERTISEMENT

5 ವರ್ಷಗಳ ನಂತರ ತಮಿಳುನಾಡು ತಂಡವು ಪ್ರಶಸ್ತಿ ಜಯಿಸಿದ ಸಾಧನೆ ಮಾಡಿತು. ಸತತ ಎರಡನೇ ವರ್ಷ ತಂಡವು ಫೈನಲ್‌ ಪ್ರವೇಶಿಸಿತ್ತು. ಹೋದ ಸಲದ ಫೈನಲ್‌ನಲ್ಲಿ ಕರ್ನಾಟಕ ತಂಡದ ಎದುರು ಸೋತಿತ್ತು. ಈ ಬಾರಿ ಕರ್ನಾಟಕ ತಂಡವು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋತು ಹೊರಬಿದ್ದಿತ್ತು.

ಬರೋಡಾ ತಂಡದ ವಿಷ್ಣು ಸೋಳಂಕಿ (49; 55ಎ), ಅತೀತ್‌ ಶೇಟ್ (29; 30ಎ) ನಾಯಕ ಕೇದಾರ್ ದೇವಧರ್ (16 ರನ್) ಮತ್ತು ಭಾರ್ಗವ್ ಭಟ್ (12 ರನ್) ಮಾತ್ರ ಎರಡಂಕಿ ಮೊತ್ತ ಮುಟ್ಟಿದರು. 22 ವರ್ಷದ ಎಡಗೈ ಸ್ಪಿನ್ನರ್ ಸಿದ್ಧಾರ್ಥ್ ಪಿಚ್‌ನ ಸತ್ವಕ್ಕೆ ತಕ್ಕಂತೆ ಬೌಲಿಂಗ್ ಮಾಡಿ ಯಶಸ್ವಿಯಾದರು.

ಪಂದ್ಯದ ಎರಡನೇ ಓವರ್‌ನಲ್ಲಿಯೇ ಬಾಬಾ ಅಪರಾಜಿತ್‌ ಬೌಲಿಂಗ್‌ನಲ್ಲಿ ನಿನಾದ್ ರಾಥ್ವಾ ಔಟಾದರು. ಆಗ ಕ್ರೀಸ್‌ಗೆ ಬಂದ ವಿಷ್ಣು ಸೋಳಂಕಿ ಉತ್ತಮವಾಗಿ ಆಡಿದರು. ಅವರೊಂದಿಗೆ ಜೊತೆಯಾಟ ಕುದುರಿಸಿದ್ದ ನಾಯಕ ಕೇದಾರ್ ದೇವಧರ್ ಅವರನ್ನು ನಾಲ್ಕನೇ ಓವರ್‌ನಲ್ಲಿ ಔಟ್ ಮಾಡಿದ ಸಿದ್ಧಾರ್ಥ್ ತಮ್ಮ ಖಾತೆ ಆರಂಭಿಸಿದರು.

ಸ್ಮಿತ್ ಪಟೇಲ್, ಅಭಿಮನ್ಯು ಸಿಂಗ್ ರಜಪೂತ್, ಕಾರ್ತಿಕ್ ಕಾಕಡೆ ವಿಕೆಟ್‌ಗಳನ್ನು ಗಳಿಸಿದರು. ಅವರಿಗೆ ಉಳಿದ ಬೌಲರ್‌ಗಳಿಂದಲೂ ಉತ್ತಮ ಜೊತೆ ಸಿಕ್ಕಿತು. ಫೀಲ್ಡಿಂಗ್ ಕೂಡ ಚುರುಕಾಗಿತ್ತು. ಆದ್ದರಿಂದ ಭಾನು ಪನಿಯಾ ಮತ್ತು ವಿಷ್ಣು ಸೋಳಂಕಿ ರನ್‌ಔಟ್ ಆದರು.ಸಾಧಾರಣ ಮೊತ್ತವನ್ನೇ ರಕ್ಷಿಸಿಕೊಳ್ಳುವ ಬರೋಡಾ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಅತಿಥ್ ಶೇಟ್, ಲುಕ್ಮನ್ ಮೆರಿವಾಲ ಮತ್ತು ಬಾಬಾಶಫಿ ಪಠಾಣ್ ಅವರು ಉತ್ತಮವಾಗಿ ಬೌಲಿಂಗ್ ಮಾಡಿದರು. ತಲಾ ಒಂದು ವಿಕೆಟ್ ಕೂಡ
ಗಳಿಸಿದರು.

ಆದರೆ ಬಾಬಾ ಅಪರಾಜಿತ್ ಮತ್ತು ದಿನೇಶ್ ಕಾರ್ತಿಕ್ ಅವರು ಮಧ್ಯಮಕ್ರಮಾಂಕದಲ್ಲಿ ಎಚ್ಚರಿಕೆಯ ಆಟವಾಡಿದ್ದರಿಂದ ಆತಂಕ ದೂರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.