ADVERTISEMENT

ಅಶ್ರಫ್‌ ಚಾಚಾಗೆ ಸಚಿನ್ ತೆಂಡೂಲ್ಕರ್ ನೆರವು

ಪಿಟಿಐ
Published 25 ಆಗಸ್ಟ್ 2020, 19:05 IST
Last Updated 25 ಆಗಸ್ಟ್ 2020, 19:05 IST
ಸಚಿನ್ ತೆಂಡೂಲ್ಕರ್ –ಪ್ರಜಾವಾಣಿ ಚಿತ್ರ
ಸಚಿನ್ ತೆಂಡೂಲ್ಕರ್ –ಪ್ರಜಾವಾಣಿ ಚಿತ್ರ   

ಮುಂಬೈ: ಬ್ಯಾಟ್‌ ತಯಾರಿ ಮಾಡುವುದರಲ್ಲಿ ನಿಸ್ಸೀಮರಾಗಿರುವ, ಕ್ರಿಕೆಟ್ ವಲಯದಲ್ಲಿ ‘ಅಶ್ರಫ್ ಚಾಚಾ’ ಎಂದೇ ಕರೆಯಲಾಗುವ ಅಶ್ರಫ್ ಚೌಧರಿ ಅವರಿಗೆ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಹಾಯ ಮಾಡಿದ್ದಾರೆ. ನ್ಯುಮೋನಿಯಾ ಮತ್ತು ಮಧುಮೇಹದಿಂದ ಬಳಲುತ್ತಿರುವ ಅಶ್ರಫ್‌ ಅವರನ್ನು 12 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ತೆಂಡೂಲ್ಕರ್ ಅವರು ನೆರವಿಗೆ ಮುಂದಾಗಿದ್ದು ಖುದ್ದಾಗಿ ಅಶ್ರಫ್ ಅವರ ಜೊತೆ ಮಾತನಾಡಿದ್ದಾರೆ. ಅವರಿಗೆ ಆರ್ಥಿಕ ಸಹಾಯವನ್ನೂ ಮಾಡಿದ್ದಾರೆ. ಆಸ್ಪತ್ರೆ ವೆಚ್ಚದ ಬಹುಪಾಲನ್ನು ಅವರೇ ಭರಿಸಿದ್ದಾರೆ’ ಎಂದು ಅಶ್ರಫ್ ಅವರ ಆಪ್ತ ಪ್ರಶಾಂತ್ ಜೇಠ್ಮಲಾನಿ ತಿಳಿಸಿದ್ದಾರೆ.

‘ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಖ್ಯಾತ ಆಟಗಾರರಿಗೆ ಅಶ್ರಫ್ ಬ್ಯಾಟ್ ತಯಾರಿಸಿಕೊಟ್ಟಿದ್ದಾರೆ. ಆದರೆ ಕೋವಿಡ್–19 ಹಾವಳಿಯಿಂದಾಗಿ ಅವರ ಉದ್ಯಮಕ್ಕೆ ಹೊಡೆತ ಬಿತ್ತು. ಆರೋಗ್ಯವೂ ಕೈಕೊಟ್ಟು ಸಂಕಷ್ಟಕ್ಕೆ ಈಡಾದರು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಪಂದ್ಯಗಳು ಮತ್ತು ಐಪಿಎಲ್ ಟೂರ್ನಿ ನಡೆಯುವಾಗ ಅವರು ಉಪಸ್ಥಿತರಿರುತ್ತಿದ್ದರು.

ADVERTISEMENT

ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ಕೀರನ್ ‍ಪೊಲಾರ್ಡ್ ಮುಂತಾದವರು ಅಶ್ರಫ್ ನಿರ್ಮಿಸಿದ ಬ್ಯಾಟಿನಲ್ಲಿ ಸಿಕ್ಸರ್ ಸಿಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.