ADVERTISEMENT

ಟೆಸ್ಟ್‌ ಕ್ರಿಕೆಟ್ ಮಾದರಿಯೇ ಬೆಸ್ಟ್

ಎಂಸಿಸಿ ಸಮೀಕ್ಷೆಯಲ್ಲಿ ಬಹಿರಂಗ: ಶೇ86 ಜನರ ಒಲವು

ಪಿಟಿಐ
Published 9 ಮಾರ್ಚ್ 2019, 18:38 IST
Last Updated 9 ಮಾರ್ಚ್ 2019, 18:38 IST
   

ಬೆಂಗಳೂರು: ಚುಟುಕು ಕ್ರಿಕೆಟ್ ಅಬ್ಬರದಲ್ಲಿ ಟೆಸ್ಟ್‌ ಕ್ರಿಕೆಟ್ ಮಾದರಿಯು ನಶಿಸುತ್ತಿದೆ ಎಂಬ ಕಾಳಜಿ ಬಹಳಷ್ಟು ಹಿರಿಯ ಆಟಗಾರರಿಂದ ಈಗಾಗಲೇ ವ್ಯಕ್ತವಾಗಿದೆ.

ಆದರೆ ಟೆಸ್ಟ್ ಕ್ರಿಕೆಟ್‌ನ ಜನಪ್ರಿಯತೆ ಒಂದಿಷ್ಟೂ ಕುಂದಿಲ್ಲ ಎಂದು ಮೆರಿಲ್‌ಬೊನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ತನ್ನ ಸಮೀಕ್ಷೆಯ ಮೂಲಕ ಬಹಿರಂಗಗೊಳಿಸಿದೆ. ಶನಿವಾರ ಈ ಸಮೀಕ್ಷೆಯ ಫಲಿತಾಂಶವನ್ನೂ ಪ್ರಕಟಿಸಿದೆ. ಈ ಸಂಗತಿಯು ದೀರ್ಘ ಮಾದರಿ ಕ್ರಿಕೆಟ್ ಪ್ರಿಯರಿಗೆ ಸಂತಸ ತಂದಿದೆ.

‘ಎಂಸಿಸಿ ಟೆಸ್ಟ್ ಕ್ರಿಕೆಟ್ ಸರ್ವೆ’ಯಲ್ಲಿ ಕ್ಲಬ್ ತಂಡವು ನೂರು ದೇಶಗಳಿಂದ ಆಯ್ಕೆ ಮಾಡಿಕೊಂಡ 13 ಸಾವಿರ ಕ್ರಿಕೆಟ್‌ ಅಭಿಮಾನಿಗಳಿಂದ ಮಾಹಿತಿ ಪಡೆದಿತ್ತು. ಇದರಲ್ಲಿ ಶೇ 86ರಷ್ಟು ಜನರು ಐದು ದಿನಗಳ ಟೆಸ್ಟ್‌ ಕ್ರಿಕೆಟ್‌ ವೀಕ್ಷಣೆಗೆ ಹೆಚ್ಚು ಒತ್ತು ನೀಡಿದ್ದಾರೆ. ಉಳಿದವರು ಏಕದಿನ, ಅಂತರರಾಷ್ಟ್ರೀಯ ಟ್ವೆಂಟಿ–20 ಮತ್ತು ದೇಶಿ ಟ್ವೆಂಟಿ–20 ಪಂದ್ಯಗಳ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.

ADVERTISEMENT

‘ನಾವು ಮಾಹಿತಿ ಪಡೆದವರಲ್ಲಿ ಬಹುತೇಕ ಅಭಿಮಾನಿಗಳು ಟೆಸ್ಟ್ ಕ್ರಿಕೆಟ್‌ ಮಾದರಿಯೇ ಶ್ರೇಷ್ಠ ಎಂದು ಅಭಿಪ್ರಾಯಪಟ್ಟಿದ್ದಾರೆ. ಕ್ರೀಡಾಂಗಣಕ್ಕೆ ಹೋಗಿ ವೀಕ್ಷಿಸಲು, ಸ್ಕೋರ್ ಫಾಲೋ ಮಾಡಲು, ಟಿವಿ ಮತ್ತಿತರ ಡಿಜಿಟಲ್ ಸಾಧನಗಳಲ್ಲಿ ನೋಡಲು ಟೆಸ್ಟ್‌ ಉತ್ತಮ ಎಂದಿದ್ದಾರೆ’ ಎಂದು ಎಂಸಿಸಿ ತಿಳಿಸಿದೆ.

‘ಈ ಸರ್ವೆಯಲ್ಲಿ ಪಾಲ್ಗೊಂಡವರಲ್ಲಿ ಶೇ 50ರಷ್ಟು ಜನರು ತಾವು ಪ್ರತಿಯೊಂದು ಟೆಸ್ಟ್‌ ಅನ್ನೂ ಕ್ರೀಡಾಂಗಣಕ್ಕೆ ತೆರಳಿ ವೀಕ್ಷಿಸುವ ಉತ್ಕಟ ಆಸೆ ಇದೆ. ಆದರೆ, ಸಮಯ ಮತ್ತು ಟಿಕೆಟ್‌ ದರವನ್ನು ಭರಿಸಲು ಆಗುವುದಿಲ್ಲ. ಆದ್ದರಿಂದ ಟಿವಿಯಲ್ಲಿ ವೀಕ್ಷಿಸುತ್ತೇವೆ’ ಎಂದಿದ್ದಾರೆ.

ಹಿರಿಯ ಕ್ರಿಕೆಟಿಗರಾದ ಸೌರವ್ ಗಂಗೂಲಿ,ಬ್ರೆಂಡನ್ ಮೆಕ್ಲಮ್, ರಿಕಿ ಪಾಂಟಿಂಗ್, ಕುಮಾರ ಸಂಗಕ್ಕಾರ ಮತ್ತು ಶೇನ್ ವಾರ್ನ್ ಅವರು ಇರುವ ಎಂಸಿಸಿ ವಿಶ್ವ ಸಮಿತಿಯ ಮಾರ್ಗದರ್ಶನದಲ್ಲಿ ಈ ಸಮೀಕ್ಷೆ ನಡೆದಿದೆ.

‘ಐದು ದಿನಗಳವರೆಗೆ ಕುಳಿತು ಪಂದ್ಯ ವೀಕ್ಷಿಸಲು ಜನರಿಗೆ ಸಮಯವಿಲ್ಲ. ಇದರಿಂದಾಗಿ ಟೆಸ್ಟ್ ಮಾದರಿ ಕ್ರಿಕೆಟ್ ಅವಸಾನದತ್ತ ಸಾಗುತ್ತಿದೆ’ ಎಂದು ಐಸಿಸಿ ಮುಖ್ಯಸ್ಥ ಶಶಾಂಕ್ ಮನೋಹರ್ ಈಚೆಗಷ್ಟೇ ಕಳವಳ ವ್ಯಕ್ತಪಡಿಸಿದ್ದರು.

ಆದರೆ, ಟೆಸ್ಟ್ ಕ್ರಿಕೆಟ್ ನಶಿಸುವುದಿಲ್ಲ. ಆದರೆ ಇಂದಿನ ಸ್ಪರ್ಧಾ ಯುಗದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಐಸಿಸಿ ನಿರ್ಗಮಿನ ಮುಖ್ಯ ಕಾರ್ಯನಿರ್ವಾಹಕ ಡೇವ್ ರಿಚರ್ಡ್ಸನ್ ಕೂಡ ಹೇಳಿದ್ದರು.

ಟೆಸ್ಟ್ ಮಾದರಿಯ ಉಳಿವಿಗಾಗಿ ಇದೇ ಮೊದಲ ಬಾರಿಗೆ ಜುಲೈನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಆಯೋಜಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.