ADVERTISEMENT

ಅನುಭವದ ಮೂಲಕ ನಾಯಕತ್ವ: ಕುಂಬ್ಳೆ

‘ದ ವಿನ್ನಿಂಗ್ ಸಿಕ್ಸರ್ ಲೀಡರ್‌ಷಿಪ್ ಲೆಸನ್ಸ್‌ ಟು ಮಾಸ್ಟರ್’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 19:45 IST
Last Updated 16 ಜನವರಿ 2020, 19:45 IST
ಬೆಂಗಳೂರಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟಿಗ ಡಬ್ಲ್ಯು.ವಿ. ರಾಮನ್ (ಎಡದಿಂದ ನಾಲ್ಕನೇಯವರು) ಅವರು ಬರೆದಿರುವ  ದ ವಿನ್ನಿಂಗ್ ಸಿಕ್ಸರ್ ಲೀಡರ್‌ಷಿಪ್ ಲೆಸನ್ಸ್‌ ಟು ಮಾಸ್ಟರ್ ಕೃತಿಯನ್ನು ಅನಿಲ್ ಕುಂಬ್ಳೆ ಬಿಡುಗಡೆ ಮಾಡಿದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾವಿಡ್, ಟಿ.ವಿ.ಎಸ್. ಟೈರ್ಸ್ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪಿ. ಮಾಧವನ್ ಹಾಜರಿದ್ದರು  –ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟಿಗ ಡಬ್ಲ್ಯು.ವಿ. ರಾಮನ್ (ಎಡದಿಂದ ನಾಲ್ಕನೇಯವರು) ಅವರು ಬರೆದಿರುವ  ದ ವಿನ್ನಿಂಗ್ ಸಿಕ್ಸರ್ ಲೀಡರ್‌ಷಿಪ್ ಲೆಸನ್ಸ್‌ ಟು ಮಾಸ್ಟರ್ ಕೃತಿಯನ್ನು ಅನಿಲ್ ಕುಂಬ್ಳೆ ಬಿಡುಗಡೆ ಮಾಡಿದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾವಿಡ್, ಟಿ.ವಿ.ಎಸ್. ಟೈರ್ಸ್ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪಿ. ಮಾಧವನ್ ಹಾಜರಿದ್ದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ಯಾರೂ ತಮ್ಮ ಜನ್ಮದಿಂದ ನಾಯಕರಾಗಿರುವುದಿಲ್ಲ. ಅನುಭವ ಗಳಿಸಿದಂತೆ ನಾಯಕತ್ವ ರೂಪುಗೊಳ್ಳುತ್ತದೆ ಎಂದು ಹಿರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟರು.

ಭಾರತ ಮಹಿಳಾ ತಂಡದ ಕೋಚ್ ಡಬ್ಲ್ಯು.ವಿ. ರಾಮನ್ ಅವರು ಬರೆದಿರುವ ‘ದ ವಿನ್ನಿಂಗ್ ಸಿಕ್ಸರ್ ಲೀಡರ್‌ಷಿಪ್ ಲೆಸನ್ಸ್‌ ಟು ಮಾಸ್ಟರ್’ ಕೃತಿಯನ್ನು ಗುರುವಾರ ಬಿಡುಗಡೆ ಮಾಡಿದ ಅನಿಲ್ ಸಂವಾದದಲ್ಲಿ ಮಾತನಾಡಿದರು.

‘ಕ್ರಿಕೆಟ್‌ನಲ್ಲಿ ನಾಯಕತ್ವ ಕಲಿಸಲು ಶಾಲೆಯಿಲ್ಲ. ಒಬ್ಬ ವ್ಯಕ್ತಿಯನ್ನು ಆಳವಾದ ನೀರಿಗೆ ಎಸೆದಾಗ ಹೇಗೆ ಈಜುತ್ತಾರೆಂಬುದು ಗೊತ್ತಾಗುತ್ತದೆ. ಮೈದಾನದೊಳಗೆ ಮತ್ತು ಹೊರಗೆ ಎದುರಾಗುವ ಸವಾಲುಗಳನ್ನು ಮೊದಲೇ ಊಹಿಸಿ ಕಲಿಸುವುದು ಸಾಧ್ಯವಿಲ್ಲ. ಆದ್ದರಿಂದ ಅನುಭವಕ್ಕೆ ತಕ್ಕಂತೆ ನಾಯಕತ್ವ ಬೆಳೆಯುತ್ತದೆ’ ಎಂದರು.

ADVERTISEMENT

2007–08ರಲ್ಲಿ ತಾವು ಭಾರತ ತಂಡದ ನಾಯಕತ್ವ ವಹಿಸಿದ್ದ ಸಂದರ್ಭವನ್ನು ಸ್ಮರಿಸಿಕೊಂಡರು.

‘ನಾಯಕನ ಯಶಸ್ಸಿಗೆ ತಂಡದಲ್ಲಿ ಉತ್ತಮ ಆಟಗಾರರು ಇರುವುದು ಅವಶ್ಯಕ. ನಾನು ಅದೃಷ್ಟಶಾಲಿಯಾಗಿದ್ದೆ. ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ತಂಡದಲ್ಲಿದ್ದರು. ಯಾವುದೇ ವ್ಯಕ್ತಿಗಿಂತ ಕ್ರಿಕೆಟ್ ದೊಡ್ಡದು. ಆದ್ದರಿಂದ ತಂಡವಾಗಿ ಆಡಬೇಕು. ಸವಾಲುಗಳನ್ನು ಪರಿಹರಿಸಬೇಕು’ ಎಂದರು.

‘ಉತ್ತಮ ಸಂವಹನ ಮತ್ತು ಪರಸ್ಕರ ಗೌರವಾದರಗಳಿದ್ದರೆ ತಂಡದಲ್ಲಿರುವ ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗುವುದು ಸುಲಭ. ಈ ಎರಡು ಗುಣಗಳು ನಾಯಕರಾದವರಿಗೆ ಬಹುಮುಖ್ಯ’ ಎಂದು ಕುಂಬ್ಳೆ ಹೇಳಿದರು.

ಸಂವಾದದಲ್ಲಿ ಭಾಗವಹಿಸಿದ್ದ ಡಬ್ಲ್ಯು.ವಿ. ರಾಮನ್, ‘ಕುಂಬ್ಳೆ ಮಾತುಗಳಿಗೆ ನನ್ನ ಸಹಮತವಿದೆ. ಅನುಭವ ಎಂಬುದು ಕಠಿಣ ಸ್ವಭಾವದ ಗುರುವಿದ್ದಂತೆ. ಯಾವುದೇ ಅನುಭವವು ಮೊದಲು ಶಿಕ್ಷಿಸುತ್ತದೆ. ನಂತರ ಪಾಠ ಕಲಿಸುತ್ತದೆ. ತೀರ್ಮಾನ ಮತ್ತು ಅವಲೋಕನದ ನಡುವೆ ವ್ಯತ್ಯಾಸವಿದೆ. ಅವಲೋಕನದಲ್ಲಿ ಮತ್ತೊಂದು ಅವಕಾಶವಿರುತ್ತದೆ. ಆದರೆ, ತೀರ್ಮಾನ ಎಂಬುದು ಅಂತಿಮ. ಅದರಲ್ಲಿ ಬದಲಾವಣೆ ಇರುವುದಿಲ್ಲ’ ಎಂದರು.

ಸಂವಾದದಲ್ಲಿ ಭಾಗವಹಿಸಿದ್ದ ಟಿವಿಎಸ್ ಟೈರ್ಸ್‌ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪಿ. ಮಾಧವನ್, ‘ಕಾರ್ಪೋರೆಟ್ ಕ್ಷೇತ್ರದಲ್ಲಿಯೂ ನಾಯಕತ್ವ ಮಹತ್ವದ್ದಾಗಿದೆ. ಪ್ರತಿಯೊಂದು ವಿಭಾಗದಲ್ಲಿರುವ ತಂಡವನ್ನು ಸೂಕ್ತ ಸಂವಹನದ ಮೂಲಕ ಒಗ್ಗೂಡಿಸಿಕೊಂಡು ಹೋಗಬೇಕು. ಆಗ ಮಾತ್ರ ಲಾಭ ಮತ್ತು ಯಶಸ್ಸು ಸಾಧ್ಯ’ ಎಂದರು.

ಕಾರ್ಯಕ್ರಮದಲ್ಲಿ ಎನ್‌.ಸಿ.ಎ ಮುಖ್ಯಸ್ಥ ರಾಹುಲ್ ದ್ರಾವಿಡ್, ಹಿರಿಯ ಕ್ರಿಕೆಟಿಗರಾದ ಜಿ.ಆರ್. ವಿಶ್ವನಾಥ್, ಅಜಿಂಕ್ಯ ರಹಾನೆ, ಕೆಎಸ್‌ಸಿಎ ಅಧ್ಯಕ್ಷ ರೋಜರ್ ಬಿನ್ನಿ, ನರೇಂದ್ರ ಹಿರ್ವಾನಿ, ಸದಾನಂದ ವಿಶ್ವನಾಥ್ ಮತ್ತು ಮಿಥಾಲಿ ರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.