ಆರ್. ಅಶ್ವಿನ್
(ಪಿಟಿಐ ಚಿತ್ರ)
ಬ್ರಿಸ್ಬೇನ್: ಭಾರತ ಕ್ರಿಕೆಟ್ ತಂಡದ ಆಟಗಾರ ರವಿಚಂದ್ರನ್ ಅಶ್ವಿನ್ ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ 38 ವರ್ಷದ ಅಶ್ವಿನ್, 'ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ನನ್ನ ಕೊನೆಯ ದಿನ' ಎಂದು ಪ್ರಕಟಿಸಿದ್ದಾರೆ.
ಈ ಸಂದರ್ಭದಲ್ಲಿ ಅಶ್ವಿನ್ ಹತ್ತಿರದಲ್ಲೇ ನಾಯಕ ರೋಹಿತ್ ಶರ್ಮಾ ಉಪಸ್ಥಿತರಿದ್ದರು.
ಆಸ್ಟ್ರೇಲಿಯಾದಲ್ಲಿ ಸಾಗುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಮಧ್ಯೆ ದಿಢೀರ್ ನಿವೃತ್ತಿ ನಿರ್ಧಾರ ಪ್ರಕಟಿಸಿರುವ ಅಶ್ವಿನ್, ಕ್ರೀಡಾಪ್ರೇಮಿಗಳನ್ನು ಆಶ್ಚರ್ಯಚಕಿತಗೊಳಿಸಿದ್ದಾರೆ.
ಬ್ರಿಸ್ಬೇನ್‌ನ ಗಾಬಾದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾಗೊಂಡಿರುವ ಬೆನ್ನಲ್ಲೇ ಅಶ್ವಿನ್ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.
'ನನ್ನಲ್ಲಿ ಇನ್ನೂ ಸಾಮರ್ಥ್ಯ ಇದೆ ಎಂದು ನಾನು ನಂಬಿದ್ದೇನೆ. ಬಹುಶಃ ಅದನ್ನು ಕ್ಲಬ್ ಮಟ್ಟದ ಕ್ರಿಕೆಟ್‌ನಲ್ಲಿ ಪ್ರದರ್ಶಿಸಲಿದ್ದೇನೆ' ಎಂದು ಅವರು ಹೇಳಿದ್ದಾರೆ.
'ಇದು ನನ್ನ ಪಾಲಿಗೆ ಭಾವನಾತ್ಮಕ ಕ್ಷಣ. ಕ್ರಿಕೆಟ್ ಅನ್ನು ತುಂಬಾ ಆನಂದಿಸಿದ್ದೇನೆ. ರೋಹಿತ್ ಶರ್ಮಾ ಮತ್ತು ಇತರೆ ತಂಡದ ಸಹ ಆಟಗಾರರೊಂದಿಗೆ ನನಗೆ ಹಲವಾರು ಸ್ಮರಣೀಯ ನೆನಪುಗಳಿವೆ' ಎಂದು ಅವರು ಹೇಳಿದ್ದಾರೆ.
'ನನ್ನ ಈ ವೃತ್ತಿ ಜೀವನದಲ್ಲಿ ನೆರವಾದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಬಿಸಿಸಿಐ, ನನ್ನ ತಂಡ, ನನ್ನ ಕೋಚ್ ಬಳಗ ಎಲ್ಲರೂ ಈ ಪಯಣದ ಭಾಗವಾಗಿದ್ದಾರೆ. ಮುಖ್ಯವಾಗಿಯೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ವಿಕೆಟ್ ಹಿಂದೆ ನಿಂತು ಕ್ಯಾಚ್‌ಗಳನ್ನು ಹಿಡಿದು ನನಗೆ ವಿಕೆಟ್ ಗಳಿಸುವಲ್ಲಿ ನೆರವಾಗಿದ್ದಾರೆ' ಎಂದು ಉಲ್ಲೇಖಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಆಟವನ್ನು ತಾವು ಆನಂದಿಸಿರುವುದಾಗಿ ಅಶ್ವಿನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.