ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ: ಧನುಷ್ಕಾ ವಿರುದ್ಧ ಮೂರು ದೂರುಗಳು ವಜಾ

ಪಿಟಿಐ
Published 18 ಮೇ 2023, 15:40 IST
Last Updated 18 ಮೇ 2023, 15:40 IST
ಧನುಷ್ಕಾ ಗುಣತಿಲಕ
ಧನುಷ್ಕಾ ಗುಣತಿಲಕ   

ಸಿಡ್ನಿ: ಶ್ರೀಲಂಕಾದ ಕ್ರಿಕೆಟಿಗ ಧನುಷ್ಕಾ ಗುಣತಿಲಕ ಅವರ ವಿರುದ್ಧ ದಾಖಲಾಗಿದ್ದ ನಾಲ್ಕು ಲೈಂಗಿಕ ದೌರ್ಜನ್ಯ ಪ್ರಕರಣಗಳ ಪೈಕಿ ಮೂರು ದೂರುಗಳನ್ನು ಕೈಬಿಡಲಾಗಿದೆ.

ಹೋದ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆದ ಸಂದರ್ಭದಲ್ಲಿ ಶ್ರೀಲಂಕಾ ತಂಡ ಉಳಿದುಕೊಂಡಿದ್ದ ಹೋಟೆಲ್‌ನಿಂದ ಧನುಷ್ಕಾ ಅವರನ್ನು ಪೊಲೀಸರು ಬಂಧಿಸಿದ್ದರು.

‘ಧನುಷ್ಕಾ ಅವರು ಡೇಟಿಂಗ್ ಆ್ಯಪ್ ಮೂಲಕ 29 ವರ್ಷದ ಮಹಿಳೆಯೊಬ್ಬರನ್ನು ಪರಿಚಯಿಸಿಕೊಂಡಿದ್ದರು. ಹೋಟೆಲ್‌ನಲ್ಲಿ ಅವರು ಜೊತೆಗೂಡಿದ್ದರು. ನಂತರ ಮಹಿಳೆಯೊಂದಿಗೆ ಆಕೆಯ ಮನೆಗೂ ಧನುಷ್ಕಾ ತೆರಳಿದ್ದರು. ಆ ಸಂದರ್ಭದಲ್ಲಿ ಬಲಾತ್ಕಾರ ಮಾಡಿರುವುದಾಗಿ ಧನುಷ್ಕಾ ವಿರುದ್ಧ ಮಹಿಳೆ ದೂರು ದಾಖಲಿದ್ದಾರೆ‘ ಎಂದು ಪೊಲೀಸರು ತಿಳಿಸಿದ್ದರು. ತಮ್ಮ ಮೇಲೆ ನಾಲ್ಕು ಬಾರಿ ಬಲಾತ್ಕಾರ ಎಸಗಿದ್ದಾರೆಂದು ಮಹಿಳೆ ಆರೋಪಿಸಿದ್ದರು.

ADVERTISEMENT

‘ನಾಲ್ಕರಲ್ಲಿ ಒಂದು ಪ್ರಕರಣವನ್ನಷ್ಟೇ ಉಳಿಸಿಕೊಳ್ಳಲಾಗಿದೆ. ಆದರೆ ಇನ್ನುಳಿದಂತೆ ಮೂರು ಬಾರಿ ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಲಾಗಿತ್ತು ಎಂಬ ದೂರುಗಳನ್ನು ಕೈಬಿಡಲು ಪಬ್ಲಿಕ್ ಪ್ರಾಸಿಕ್ಯೂಷನ್ ನಿರ್ದೇಶಕ ಹಗ್ ಬಡಿನ್ ತಿಳಿಸಿದ್ದಾರೆ‘ ಎಂದು ಸಂಡೇ ಮಾರ್ನಿಂಗ್ ಪತ್ರಿಕೆ ವರದಿ ಮಾಡಿದೆ.

ಧನುಷ್ಕಾ ಎಂಟು ಟೆಸ್ಟ್, 47 ಏಕದಿನ ಹಾಗೂ 46 ಟಿ20 ಪಂದ್ಯಗಳನ್ನು ಆಡಿದ್ದಾರೆ. 2021ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡದಲ್ಲಿದ್ದ ಧನುಷ್ಕಾ ಬಯೊಬಬಲ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಆರು ತಿಂಗಳು ಅಮಾನತುಗೊಂಡಿದ್ದರು. ಅವರೊಂದಿಗೆ ಕುಶಾಲ ಮೆಂಡಿಸ್ ಮತ್ತು ನಿರೋಷನ್ ಡಿಕ್ವೆಲಾ ಕೂಡ ಅಮಾನತುಗೊಂಡಿದ್ದರು. 

2017ರಲ್ಲಿ ಟೂರ್ನಿಯೊಂದರಲ್ಲಿ ನೆಟ್ಸ್‌ ಅವಧಿಯನ್ನು ತಪ್ಪಿಸಿಕೊಂಡಿದ್ದಕ್ಕಾಗಿ ಹಾಗೂ ಪಂದ್ಯಕ್ಕೆ ಕ್ರಿಕೆಟ್ ಸಲಕರಣೆಗಳಿಲ್ಲದೇ ಬಂದಿದ್ದಕ್ಕಾಗಿಯೂ ಆರು ತಿಂಗಳು ಅಮಾನತು ಶಿಕ್ಷೆ ಅನುಭವಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.