ADVERTISEMENT

ಅಂಗಣಕ್ಕೆ ಇಳಿದ ಅಫ್ಗಾನ್ ಕ್ರಿಕೆಟ್ ತಂಡದ ಆಟಗಾರರಿಂದ ಅಭ್ಯಾಸ ಆರಂಭ

ಪಿಟಿಐ
Published 7 ಜೂನ್ 2020, 16:46 IST
Last Updated 7 ಜೂನ್ 2020, 16:46 IST
ಅಸ್ಗರ್ ಅಫ್ಗಾನ್ –ಎಎಫ್‌ಪಿ ಚಿತ್ರ
ಅಸ್ಗರ್ ಅಫ್ಗಾನ್ –ಎಎಫ್‌ಪಿ ಚಿತ್ರ   

ಕಾಬೂಲ್: ಕೊರೊನಾ ಪಿಡುಗಿನಿಂದ ಉಂಟಾಗಿದ್ದ ವಿಷಮ ಪರಿಸ್ಥಿತಿಯಿಂದಾಗಿ ಕ್ರೀಡಾಂಗಣದಿಂದ ದೂರ ಉಳಿದಿದ್ದ ಅಫ್ಗಾನ್ ಕ್ರಿಕೆಟ್ ತಂಡದ ಅನುಭವಿ ಆಟಗಾರರಿಗೆ ಭಾನುವಾರ ಸಂಭ್ರಮದ ದಿನ. ಒಂದು ತಿಂಗಳು ನಡೆಯಲಿರುವ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಆಟಗಾರರು ಹುರುಪಿನಿಂದ ಅಭ್ಯಾಸ ಮಾಡಿದರು.

ನಾಯಕಅಸ್ಗರ್ ಅಫ್ಗಾನ್, ಗೂಗ್ಲಿ ಪರಿಣಿತ ರಶೀದ್ ಖಾನ್, ಬೌಲಿಂಗ್ ಆಲ್‌ರೌಂಡರ್ ಮೊಹಮ್ಮದ್ ನಬಿ, ಎಡಗೈ ಬ್ಯಾಟ್ಸ್‌ಮನ್ ಮತ್ತು ಆಫ್‌ಬ್ರೇಕ್ ಬೌಲರ್ ನಜೀಬುಲ್ಲಾ ಜದ್ರಾನ್, ಎಡಗೈ ವೇಗದ ಬೌಲರ್ ಶಪೂರ್ ಜದ್ರಾನ್ ಮುಂತಾದವರು ತರಬೇತಿಗೆ ಹಾಜರಾದ ಆಟಗಾರರಲ್ಲಿ ಪ್ರಮುಖರು.

ಕಾಬೂಲ್ ಕ್ರಿಕೆಟ್ ಅಂಗಣದಲ್ಲಿ ತರಬೇತಿ ನಡೆಯುತ್ತಿರುವುದಾಗಿ ಅಫ್ಗಾನ್ ಕ್ರಿಕೆಟ್ ಮಂಡಳಿ (ಎಸಿಬಿ) ತಿಳಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ ಸಾಮರ್ಥ್ಯ ಹೆಚ್ಚಿಸುವ ಕಡೆಗೆ ಗಮನ ನೀಡುತ್ತಿದ್ದು ತಂಡದ ಒಟ್ಟಾರೆ ಸಾಮರ್ಥ್ಯದ ಮೇಲೆಯೂ ಪರಿಣಾಮ ಬೀರುವಂಥ ತರಬೇತಿಗೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸಿಬಿ ವಿವರಿಸಿದೆ.

ADVERTISEMENT

‘ಕೊರೊನಾ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಾವಳಿಗಳಿಗೆ ಬದ್ಧವಾಗಿಯೇ ಶಿಬಿರವನ್ನು ಆಯೋಜಿಸಲಾಗಿದೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸಾರ್ವಜನಿಕ ಆರೋಗ್ಯ ಸಚಿವಾಲಯದ ಜೊತೆ ನಿರಂತರ ಚರ್ಚೆ ನಡೆಸಲಾಗುತ್ತಿದೆ’ ಎಂದು ಪ್ರಕಟಣೆಯಲ್ಲಿ ಎಸಿಬಿ ತಿಳಿಸಿದೆ.

ತರಬೇತಿ ಶಿಬಿರ ಆರಂಭದ ಮುನ್ನಾ ದಿನವಾದ ಶನಿವಾರ ಕೇಂದ್ರ ಕಚೇರಿಯಲ್ಲಿ ಆಟಗಾರರು, ಅಧಿಕಾರಿಗಳು ಮತ್ತು ನೆರವು ಸಿಬ್ಬಂದಿಗೆ ಕೊರೊನಾ ಕುರಿತ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಶಿಬಿರದಲ್ಲಿ ಪಾಲಿಸಬೇಕಾದ ಶಿಸ್ತಿನ ಕುರಿತು ವಿವರಿಸಲಾಗಿದೆ ಎಂದು ಅದು ತಿಳಿಸಿದೆ.

ಇನ್ನೂ ಅನಿಶ್ಚಿತವಾಗಿರುವ ವಿಶ್ವ ಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಸಜ್ಜಾಗುವುದರ ಜೊತೆ ಪರ್ತ್‌ನಲ್ಲಿ ಆಸ್ಟ್ರೇಲಿಯಾ ಎದುರಿನ ಏಕೈಕ ಟೆಸ್ಟ್ ಪಂದ್ಯಕ್ಕೂ ಅಫ್ಗಾನ್ ತಂಡ ತಯಾರಾಗುತ್ತಿದೆ. ಈ ಪಂದ್ಯ ನವೆಂಬರ್ 21ರಂದು ಆರಂಭವಾಗಲಿದೆ.

ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವ ಆಟಗಾರರು: ಅಸ್ಗರ್ ಅಫ್ಗಾನ್ (ನಾಯಕ), ರಹಮತ್ ಉಲ್ಲಾ ಗುರ್ಬಜ್, ಹಜರತ್ ಉಲ್ಲಾ ನಾಜಿ, ಕರೀಂ ಜನ್ನತ್, ಮೊಹಮ್ಮದ್ ನಬಿ, ನಜೀಬುಲ್ಲಾ ಜದ್ರಾನ್, ಗುಲ್ಬದಿನ್ ನಯೀಬ್, ರಶೀದ್ ಖಾನ್, ನವೀದ್ ಉಲ್ ಹಕ್, ಶಪೂರ್ ಜದ್ರಾನ್, ಖ್ವಯೀಸ್ ಅಹಮ್ಮದ್, ಮುಜೀಬ್ ಉರ್ ರಹಮಾನ್, ಅಜ್ಮತ್ ಉಲ್ಲಾ ಒಮೆರ್ಜಯ್, ಶಮೀವುಲ್ಲಾ ಶಿನ್ವಾರಿ, ಉಸ್ಮಾನ್ ಘನಿ, ಮೊಹಮ್ಮದ್ ಶಹಜಾದ್, ಸಯೇದ್ ಶಿರ್ಜಾದ್, ದಾರ್ವಿಶ್ ರಸೂಲಿ, ಜಹೀರ್ ಖಾನ್ ಪಕ್ಟಿನ್, ಫರೀದ್ ಮಲಿಕ್, ಹಂಝಾ ಹೊತಕ್, ಶರಾಫುದ್ದೀನ್ ಅಶ್ರಫ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.