ADVERTISEMENT

ಆ್ಯಷಸ್ ಸರಣಿಯ ಮೂರನೇ ಟೆಸ್ಟ್‌: ಹೆಡ್‌ ಶತಕ, ಒತ್ತಡದಲ್ಲಿ ಇಂಗ್ಲೆಂಡ್‌

ಏಜೆನ್ಸೀಸ್
Published 19 ಡಿಸೆಂಬರ್ 2025, 13:18 IST
Last Updated 19 ಡಿಸೆಂಬರ್ 2025, 13:18 IST
   

ಅಡಿಲೇಡ್‌: ಆಕ್ರಮಣಕಾರಿ ಆಟಗಾರ ಟ್ರಾವಿಸ್ ಹೆಡ್‌ ಅಡಿಲೇಡ್‌ನಲ್ಲಿ ಸತತ ನಾಲ್ಕನೇ ಟೆಸ್ಟ್‌ ಶತಕ ಬಾರಿಸಿದರು. ಇದರಿಂದ ಆಸ್ಟ್ರೇಲಿಯಾ ತಂಡವು ಆ್ಯಷಸ್‌ ಸರಣಿಯ ಮೂರನೇ ಟೆಸ್ಟ್‌ ಪಂದ್ಯದ ಮೂರನೇ ದಿನವಾದ ಶುಕ್ರವಾರ ಆಟ ಮುಗಿದಾಗ ಇಂಗ್ಲೆಂಡ್ ವಿರುದ್ಧ ಒಟ್ಟು 356 ರನ್ ಮುನ್ನಡೆ ಸಾಧಿಸಿದ್ದು ಹಿಡಿತ ಬಿಗಿಗೊಳಿಸಿದೆ.

ಆತಿಥೇಯ ತಂಡ ಆ್ಯಷಸ್‌ ಟ್ರೋಫಿಯನ್ನು ಅನ್ನು ತನ್ನಲ್ಲೇ ಉಳಿಸಿಕೊಳ್ಳುವ ಹಾದಿಯಲ್ಲಿದೆ. ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 271 ರನ್ ಗಳಿಸಿದ್ದು, ಆರಂಭ ಆಟಗಾರ ಟ್ರಾವಿಸ್‌ ಹೆಡ್‌ ಅಜೇಯ 142 ರನ್ ಗಳಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಅಲೆಕ್ಸ್‌ ಕ್ಯಾರಿ ಔಟಾಗದೇ 52 ರನ್ ಗಳಿಸಿದ್ದಾರೆ. ಹೆಡ್ ಅವರಿಗೆ ಇದು 11ನೇ ಟೆಸ್ಟ್‌ ಶತಕ. 196 ಎಸೆತಗಳನ್ನೆದುರಿಸಿ 13 ಬೌಂಡರಿ, ಎರಡು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಈ ಪಂದ್ಯ ಇಂಗ್ಲೆಂಡ್ ಕೈತಪ್ಪಿದಂತೆ ಕಾಣುತ್ತಿದೆ. ಈ ಮೈದಾನದಲ್ಲಿ 316 ರನ್ ಇದುವರೆಗಿನ ಅತ್ಯಧಿಕ ರನ್‌ ಚೇಸ್‌ ಆಗಿದೆ. ಆಸ್ಟ್ರೇಲಿಯಾ 1902 ರಲ್ಲಿ ಇಂಗ್ಲೆಂಡ್ ವಿರುದ್ಧ ಈ ಮೊತ್ತ ಗಳಿಸಿ ಜಯ ಸಾಧಿಸಿತ್ತು.

ADVERTISEMENT

ಇದಕ್ಕೆ ಮೊದಲು, ಆಸ್ಟ್ರೇಲಿಯಾದ 371 ರನ್‌ಗಳಿಗೆ ಉತ್ತರವಾಗಿ ಗುರುವಾರ 8 ವಿಕೆಟ್‌ಗೆ 213 ರನ್ ಗಳಿಸಿದ್ದ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 286 ರನ್‌ಗಳಿಗೆ ಆಲೌಟ್‌ ಆಯಿತು. ನಾಯಕ ಬೆನ್‌ ಸ್ಟೋಕ್ಸ್ (83, 198ಎ) ಮತ್ತು ಜೋಫ್ರಾ ಆರ್ಚರ್ (51, 105ಎ) ಇಬ್ಬರೂ ಅರ್ಧ ಶತಕ ದಾಟಿದರು. ಇವರಿಬ್ಬರು ಒಂಬತ್ತನೇ ವಿಕೆಟ್‌ಗೆ 106 ರನ್ ಸೇರಿಸಿದರು.

ಸ್ಕೋರುಗಳು:

ಆಸ್ಟ್ರೇಲಿಯಾ: 371 ಮತ್ತು 66 ಓವರುಗಳಲ್ಲಿ 4 ವಿಕೆಟ್‌ಗೆ 271 (ಟ್ರಾವಿಸ್‌ ಹೆಡ್‌ ಔಟಾಗದೇ 142, ಉಸ್ಮಾನ್‌ ಖ್ವಾಜಾ 40, ಅಲೆಕ್ಸ್‌ ಕ್ಯಾರಿ ಔಟಾಗದೇ 52; ಜೋಶ್‌ ಟಂಗ್ 59ಕ್ಕೆ2);

ಇಂಗ್ಲೆಂಡ್‌: 87.2 ಓವರುಗಳಲ್ಲಿ 286 (ಬೆನ್‌ ಸ್ಟೋಕ್ಸ್‌ 83, ಜೋಫ್ರಾ ಆರ್ಚರ್ 51; ಪ್ಯಾಟ್‌ ಕಮಿನ್ಸ್ 69ಕ್ಕೆ3, ಸ್ಕಾಟ್‌ ಬೋಲ್ಯಾಂಡ್‌ 45ಕ್ಕೆ3, ನಥಾನ್ ಲಯನ್ 70ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.