
ಬೆಂಗಳೂರು: ಕಾಶ್ವಿ ಕಂಡಿಕುಪ್ಪ ಅವರ ಅಜೇಯ ಶತಕ ಹಾಗೂ ರಚಿತಾ ಹತ್ವಾರ್ ಅವರ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು 19 ವರ್ಷದೊಳಗಿನ ಮಹಿಳಾ ಏಕದಿನ ಟೂರ್ನಿಯ ಪಂದ್ಯದಲ್ಲಿ ಭಾನುವಾರ 27 ರನ್‌ಗಳಿಂದ ಮಧ್ಯಪ್ರದೇಶ ತಂಡವನ್ನು ಮಣಿಸಿತು. ಅದರೊಂದಿಗೆ ಗುಂಪು ಹಂತದಲ್ಲಿ ಎಲ್ಲ 5 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು.
ಹೈದರಾಬಾದ್‌ನ ಜಿಮ್ಖಾನಾ ಕ್ರೀಡಾಂಗಣದಲ್ಲಿ ನಡೆದ ಎಲೀಟ್ ಡಿ ಗುಂಪಿನ ಈ ಪಂದ್ಯದಲ್ಲಿ ಉಭಯ ತಂಡಗಳು ಅಂಕಪಟ್ಟಿಯ ಅಗ್ರಸ್ಥಾನ ಗಿಟ್ಟಿಸಿಕೊಳ್ಳಲು ಹೋರಾಡಿದವು. ನಾಯಕಿ ರಚಿತಾ (56; 70 ಎಸೆತ; 11x4) ಉತ್ತಮ ಬುನಾದಿ ಹಾಕಿಕೊಟ್ಟರೆ, ಕಾಶ್ವಿ (ಔಟಾಗದೇ 115; 84 ಎ; 17x4, 2x6) ಅವರು ಬಿರುಸಿನ ಶತಕದೊಂದಿಗೆ ತಂಡವು 250ರ ಗಡಿ ದಾಟಲು ನೆರವಾದರು. ರಾಜ್ಯ ತಂಡವು ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 264 ರನ್ ಗಳಿಸಿತು. ಮಧ್ಯಪ್ರದೇಶ ತಂಡದ ನಾಯಕಿ ಆಯುಷಿ ಶುಕ್ಲಾ 41 ರನ್ ನೀಡಿ 2 ವಿಕೆಟ್ ಪಡೆದರು.
ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಮಧ್ಯಪ್ರದೇಶ ತಂಡಕ್ಕೆ ವಂದಿತಾ ಕೆ. ರಾವ್ (34ಕ್ಕೆ3) ಹಾಗೂ ನಂದನಿ ಚೌಹಾನ್ (44ಕ್ಕೆ2) ಅವರು ಪರಿಣಾಮಕಾರಿ ಬೌಲಿಂಗ್ ಮೂಲಕ ಕಾಡಿದರು. ಆಯುಷಿ ಬಳಗವು ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ಗೆ 237 ರನ್ ಗಳಿಸಲಷ್ಟೇ ಶಕ್ತವಾಯಿತು. ವಿಕೆಟ್‌ಕೀಪರ್ ವೈಷ್ಣವಿ ವ್ಯಾಸ್ (39; 71ಎ, 4x3) ಹಾಗೂ ಮಹಿ ಠಾಕೂರ್ (33; 49ಎ, 4x3) ಅವರನ್ನು ಹೊರತುಪಡಿಸಿದರೆ ಉಳಿದ್ಯಾವ ಬ್ಯಾಟರ್‌ಗಳೂ 30ರ ಗಡಿ ದಾಟಲಿಲ್ಲ.
ಎಲೀಟ್ ಡಿ ಗುಂಪಿನಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದ ಕರ್ನಾಟಕ ಹಾಗೂ ಮಧ್ಯಪ್ರದೇಶ ತಂಡಗಳು ಎಂಟರ ಘಟ್ಟಕ್ಕೆ ಅರ್ಹತೆ ಪಡೆದವು. ರಚಿತಾ ಬಳಗವು ಪುಣೆಯಲ್ಲಿ ಇದೇ 28ರಂದು (ಭಾನುವಾರ) ನಡೆಯಲಿರುವ ಕ್ವಾರ್ಟರ್‌ಫೈನಲ್‌ನಲ್ಲಿ ಬಂಗಾಳ ತಂಡವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರು: ಕರ್ನಾಟಕ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 264 (ರಚಿತಾ ಹತ್ವಾರ್ 56, ಕಾಶ್ವಿ ಕಂಡಿಕುಪ್ಪ ಔಟಾಗದೇ 115, ಕಾರ್ಣಿಕಾ ಕಾರ್ತಿಕ್ 40; ಆಯುಷಿ ಶುಕ್ಲಾ 41ಕ್ಕೆ2). ಮಧ್ಯಪ್ರದೇಶ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 237 (ವೈಷ್ಣವಿ ವ್ಯಾಸ್ 39, ಮಹಿ ಠಾಕೂರ್ 33; ವಂದಿತಾ ಕೆ. ರಾವ್ 34ಕ್ಕೆ3, ನಂದನಿ ಚೌಹಾನ್ 44ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.