ಮಿಯಾಮಿ (ಎಎಫ್‌ಪಿ): ಅಮೆರಿಕ ತಂಡವು ಮಂಗಳವಾರ ನಡೆದ ಟಿ20 ಕ್ರಿಕೆಟ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಐದು ವಿಕೆಟ್‌ಗಳ ಅಚ್ಚರಿಯ ಗೆಲುವು ಸಾಧಿಸಿದೆ. ಈ ಮೂಲಕ ಟಿ20 ವಿಶ್ವಕಪ್‌ಗೆ ಆತಿಥೇಯ ತಂಡವು ಭರ್ಜರಿ ಸಿದ್ಧತೆ ನಡೆಸಿದೆ.
ಜೂನ್ 2ರಿಂದ ವೆಸ್ಟ್‌ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ. ಅದಕ್ಕೂ ಮುಂಚೆ ನಡೆಯುತ್ತಿರುವ ಮೂರು ಪಂದ್ಯಗಳ ದ್ವಿಪಕ್ಷೀಯ ಸರಣಿಯ ಮೊದಲ ಮುಖಾಮುಖಿಯಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಬಾಂಗ್ಲಾದೇಶವು 19ನೇ ರ‍್ಯಾಂಕ್‌ನ ಅಮೆರಿಕ ವಿರುದ್ಧ ಆಘಾತ ಅನುಭವಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ತಂಡವು ತೌಹಿದ್ ಹೃದಯ್ (58; 47ಎಸೆತ) ಅವರ ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ ಆರು ವಿಕೆಟ್‌ಗೆ 153 ರನ್ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಅಮೆರಿಕ ಮೂರು ಎಸೆತ ಬಾಕಿ ಇರುವಂತೆ ಐದು ವಿಕೆಟ್‌ಗೆ 156 ರನ್ ಗಳಿಸಿತು.
94 ರನ್‌ಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಕೋರಿ ಆಂಡರ್ಸನ್ (ಔಟಾಗದೇ 34; 25ಎ) ಮತ್ತು 19 ವರ್ಷದೊಳಗಿನವರ ಭಾರತ ತಂಡವನ್ನು ಪ್ರತಿನಿಧಿಸಿದ್ದ ಹರ್ಮೀತ್ ಸಿಂಗ್ (ಔಟಾಗದೇ 33; 13ಎ) ಆರನೇ ವಿಕೆಟ್‌ಗೆ ಮುರಿಯದ 62 ರನ್ (28ಎ) ಸೇರಿಸಿ ಗೆಲುವಿನ ರೂವಾರಿಗಳಾದರು. ಸರಣಿಯ ಎರಡನೇ ಪಂದ್ಯ ಗುರುವಾರ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 153 (ತೌಹಿದ್ ಹೃದಯ್ 58, ಮಹಮ್ಮದುಲ್ಲಾ 31, ಸ್ಟೀವನ್ ಟೇಲರ್ 9ಕ್ಕೆ 2). ಅಮೆರಿಕ 19.3 ಓವರ್‌ಗಳಲ್ಲಿ 5 ವಿಕೆಟ್‌ಗೆ 156 (ಕೋರಿ ಆಂಡರ್ಸನ್ ಔಟಾಗದೇ 34, ಹರ್ಮೀತ್ ಸಿಂಗ್ ಔಟಾಗದೇ 33; ಮುಸ್ತಫಿಜುರ್ ರೆಹಮಾನ್ 41ಕ್ಕೆ 2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.