
ದೋಹಾ: ಹದಿನಾಲ್ಕು ವರ್ಷದ ವೈಭವ್ ಸೂರ್ಯವಂಶಿ 32 ಎಸೆತಗಳಲ್ಲಿ ಶತಕ ಗಳಿಸಿದರು. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಹೊಡೆದ ಎರಡನೇ ಭಾರತೀಯ ಬ್ಯಾಟರ್ ಆದರು.
ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ವೈಭವ್ ಸ್ಫೊಟಕ ಶೈಲಿಯ ಬ್ಯಾಟಿಂಗ್‌ನಿಂದ ಭಾರತ ಎ ತಂಡವು 148 ರನ್‌ಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ಎ ತಂಡದ ಎದುರು ಗೆದ್ದಿತು.
ವೈಭವ್ 15 ಸಿಕ್ಸರ್ ಮತ್ತು 11 ಬೌಂಡರಿಗಳನ್ನು ಗಳಿಸಿದರು. ಒಟ್ಟು 42 ಎಸೆತಗಳಲ್ಲಿ 144 ರನ್ ಹೊಡೆದರು.
2018ರಲ್ಲಿ ರಿಷಭ್ ಪಂತ್ ಅವರು ದೆಹಲಿ ತಂಡದ ಪರ ಹಿಮಾಚಲ ಪ್ರದೇಶ ಎದುರು 32 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈ ದಾಖಲೆಯನ್ನು ವೈಭವ್ ಅವರು ಸರಿಗಟ್ಟಿದ್ದಾರೆ. ಟಿ20 ಮಾದರಿಯಲ್ಲಿ ಶರವೇಗದ ಶತಕ ಹೊಡೆದವರ ಪಟ್ಟಿಯಲ್ಲಿ ಅಭಿಷೇಕ್ ಶರ್ಮಾ ಮತ್ತು ಗುಜರಾತ್‌ನ ಊರ್ವಿಲ್ ಪಟೇಲ್ ಜಂಟಿ ಅಗ್ರಸ್ಥಾನದಲ್ಲಿದ್ಧಾರೆ. ಅವರು 28 ಎಸೆತಗಳಲ್ಲಿ ಶತಕ ದಾಖಲಿಸಿದ್ದಾರೆ.
ತಂಡದ ನಾಯಕ ಜಿತೇಶ್ ಶರ್ಮಾ ಅವರು 32 ಎಸೆತಗಳಲ್ಲಿ 83 ರನ್ ಗಳಿಸಿದರು. 8 ಬೌಂಡರಿ ಮತ್ತು 6 ಸಿಕ್ಸರ್ ಅದರಲ್ಲಿ ಸೇರಿದ್ದವು. ಅವರ ಆಟದ ಬಲದಿಂದ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 297 ರನ್ ಗಳಿಸಿತು. ಅದಕ್ಕುತ್ತರವಾಗಿ ಯುಎಇ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 149 ರನ್ ಗಳಿಸಿ ಶರಣಾಯಿತು.
ಸಂಕ್ಷಿಪ್ತ ಸ್ಕೋರು: ಭಾರತ ಎ: 20 ಓವರ್‌ಗಳಲ್ಲಿ 4ಕ್ಕೆ297 (ವೈಭವ್ ಸೂರ್ಯವಂಶಿ 144, ನಮನ್ ಧೀರ್ 34, ಜಿತೇಶ್ ಶರ್ಮಾ ಔಟಾಗದೇ 83, ಮೊಹಮ್ಮದ್ ಫರಾಜುದ್ದೀನ್ 64ಕ್ಕೆ1, ಅಯಾನ್ ಖಾನ್ 42ಕ್ಕೆ1, ಮೊಹಮ್ಮದ್ ಅರ್ಫಾನ್ 57ಕ್ಕೆ1) ಯುಎಇ: 20 ಓವರ್‌ಗಳಲ್ಲಿ 7ಕ್ಕೆ149 (ಶೋಯಬ್ ಖಾನ್ 63, ಸೈಯದ್ ಹೈದರ್ 20, ಮೊಹಮ್ಮದ್ ಅರ್ಫಾನ್ 26, ಗುರ್ಜನ್‌ಪ್ರೀತ್ ಸಿಂಗ್ 18ಕ್ಕೆ3, ಹರ್ಷ ದುಬೆ 12ಕ್ಕೆ2) ಫಲಿತಾಂಶ: ಭಾರತ ಎ ತಂಡಕ್ಕೆ 148 ರನ್ ಜಯ. ಪಂದ್ಯದ ಆಟಗಾರ: ವೈಭವ್ ಸೂರ್ಯವಂಶಿ