ದುಬೈ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ–20 ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರ ಹೆಸರನ್ನು ಜನವರಿ ತಿಂಗಳ ಐಸಿಸಿ ‘ಐಸಿಸಿ ಪ್ಲೇಯರ್ ಆಫ್ ದಿ ಮಂತ್’ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
ಐದು ಪಂದ್ಯಗಳಿಂದ 9.85ರ ಅದ್ಬುತ ಸರಾಸರಿ ಮೂಲಕ 14 ವಿಕೆಟ್ ಕಿತ್ತಿದ್ದರು. ಎಕಾನಮಿ ರೇಟ್ 7.66ರಷ್ಟಿತ್ತು.
ವರುಣ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಬ್ಯಾಟರ್‌ಗಳು ಅವರ ಚಾಕ್ಯಚಕ್ಯತೆ ಅರಿಯುವಲ್ಲಿ ವಿಫಲರಾದರು. ಭಾರತ 4–1ರಿಂದ ಟಿ–20 ಸರಣಿ ಗೆದ್ದಿತು.
ಪಾಕಿಸ್ತಾನ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ 19 ವಿಕೆಟ್ ಕಿತ್ತ ವೆಸ್ಟ್ ಇಂಡೀಸ್‌ನ ಜೊಮೆಲ್ ವಾರಿಕನ್, ಅದೇ ಸರಣಿಯಲ್ಲಿ 16 ವಿಕೆಟ್ ಪಡೆದು ಮಿಂಚಿದ ಪಾಕಿಸ್ತಾನದ ನೋಮನ್ ಅಲಿ ಪ್ರಶಸ್ತಿ ರೇಸ್‌ನಲ್ಲಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಮಹಿಳಾ ಅಂಡರ್–19 ಟಿ–20 ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದ ಭಾರತದ ಆರಂಭಿಕ ಆಟಗಾರ್ತಿ ಗೊಂಗಡಿ ತ್ರಿಷಾ, ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಸರಣಿಯಲ್ಲಿ 309 ರನ್ ಸಿಡಿಸಿರುವ ಅವರು, ಶತಕ ಬಾರಿಸಿದ ಮೊದಲ ಆಟಗಾರ್ತಿಯೂ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.