ADVERTISEMENT

ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಪ್ರೇಕ್ಷಕರ ಕರೆತರಲು ಚಿಂತನೆ

ಪಿಟಿಐ
Published 14 ಸೆಪ್ಟೆಂಬರ್ 2020, 13:19 IST
Last Updated 14 ಸೆಪ್ಟೆಂಬರ್ 2020, 13:19 IST
ಕ್ರಿಕೆಟ್‌ ಆಸ್ಟ್ರೇಲಿಯಾ ಲೋಗೊ
ಕ್ರಿಕೆಟ್‌ ಆಸ್ಟ್ರೇಲಿಯಾ ಲೋಗೊ   

ಮೆಲ್ಬರ್ನ್‌: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾಕ್ಸಿಂಗ್‌ ಡೇ ಟೆಸ್ಟ್‌ ಹಾಗೂ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ ನಡೆಯುವ ಮೆಲ್ಬರ್ನ್‌ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲು ವಿಕ್ಟೋರಿಯಾ ಸರ್ಕಾರ ಚಿಂತನೆ ನಡೆಸಿದೆ. ಈ ಕಾರಣಕ್ಕಾಗಿ ಕ್ರಿಕೆಟ್‌ ಆಸ್ಟ್ರೇಲಿಯಾ ಹಾಗೂ ಟೆನಿಸ್‌ ಆಸ್ಟ್ರೇಲಿಯಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ವಿಕ್ಟೋರಿಯಾ ಸರ್ಕಾರದ ಮುಖ್ಯಸ್ಥ ಡೇನಿಯಲ್‌ ಆ್ಯಂಡ್ರ್ಯೂಸ್‌ ಹೇಳಿದ್ದಾರೆ.

ವಿಕ್ಟೋರಿಯಾ ರಾಜ್ಯದಲ್ಲಿ ಕೋವಿಡ್‌–19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನವು (ಎಂಸಿಜಿ) ಡಿಸೆಂಬರ್‌ 26ರಂದು ನಡೆಯುವ ಬಾಕ್ಸಿಂಗ್‌ ಡೇ ಟೆಸ್ಟ್‌ನ ಆತಿಥ್ಯವನ್ನು ಕಳೆದುಕೊಳ್ಳುವ ಊಹಾಪೋಹಗಳೂ ಇವೆ.

ಕೋವಿಡ್‌ ಹಿನ್ನೆಲೆಯಲ್ಲಿ ವಿಕ್ಟೋರಿಯಾ ರಾಜ್ಯದಲ್ಲಿ ಜುಲೈನಿಂದ ಲಾಕ್‌ಡೌನ್‌ ಹೇರಲಾಗಿದೆ. ದೇಶದ ಶೇಕಡ 75ರಷ್ಟು ಸೋಂಕು ಪ್ರಕರಣಗಳು ಇಲ್ಲಿಯೇ ಕಂಡುಬಂದಿವೆ ಮತ್ತು ಸಾವಿನ ಪ್ರಮಾಣ ಶೇಕಡ 90ರಷ್ಟು ಇದೆ.

ADVERTISEMENT

‘ಸುರಕ್ಷಿತ ವಾತಾವರಣದಲ್ಲಿ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲು ನಾವು ಪ್ರಯತ್ನ ನಡೆಸಿದ್ದೇವೆ. ಎಷ್ಟು ಜನರನ್ನು ಕರೆತರಲಾಗುತ್ತದೆ ಎಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟ‘ ಎಂದು ಸುದ್ದಿಸಂಸ್ಥೆಯೊಂದಕ್ಕೆ ಆ್ಯಂಡ್ರ್ಯೂಸ್‌ ಹೇಳಿದ್ದಾರೆ.

ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್‌ ಓಪನ್ ಟೂರ್ನಿಗೆ ಎಂಟು ಲಕ್ಷಕ್ಕಿಂತ ಹೆಚ್ಚು ಪ್ರೇಕ್ಷಕರು ಸಾಕ್ಷಿಯಾಗಿದ್ದರು.2019ರಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ತಂಡಗಳ ನಡುವೆ ನಡೆದ ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಎರಡು ಲಕ್ಷಕ್ಕಿಂತ ಹೆಚ್ಚು ಜನ ಪ್ರೇಕ್ಷಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.