ವಿದರ್ಭ ತಂಡದ ಆಟಗಾರರು
ಪಿಟಿಐ ಚಿತ್ರ
ನಾಗ್ಪುರ: ಅಮೋಘ ಲಯದಲ್ಲಿರುವ ವಿದರ್ಭ ತಂಡ, 90ನೇ ವರ್ಷದ ರಣಜಿ ಟ್ರೋಫಿ ಚಾಂಪಿಯನ್ ಪಟ್ಟಕ್ಕಾಗಿ ಬುಧವಾರ ಆರಂಭವಾಗಲಿರುವ ಐದು ದಿನಗಳ ಫೈನಲ್ ಪಂದ್ಯದಲ್ಲಿ ಉತ್ಸಾಹಿ ಕೇರಳ ತಂಡವನ್ನು ಎದುರಿಸಲಿದೆ. ತವರಿನಲ್ಲಿ ಆಡಲಿರುವ ವಿದರ್ಭ ತಂಡವು ಐದು ವರ್ಷಗಳ ಹಿಂದೆ ಗೆದ್ದ ಪ್ರಶಸ್ತಿ ಮರಳಿ ಪಡೆಯುವ ತವಕದಲ್ಲಿದೆ. ಕೇರಳಕ್ಕೆ ಇದು ಮೊದಲ ಫೈನಲ್.
ಈ ಋತುವಿನಲ್ಲಿ ಅಕ್ಷಯ್ ವಾಡಕರ್ ನೇತೃತ್ವದ ತಂಡ ಅಮೋಘ ಫಾರ್ಮಿನಲ್ಲಿದೆ. ಆಡಿರುವ ಒಂಬತ್ತು ಪಂದ್ಯಗಳನ್ನು ಎಂಟು ಪಂದ್ಯಗಳನ್ನು ಅಧಿಕಾರಯುತವಾಗಿ ಗೆದ್ದಿರುವುದು ಅದರ ಪ್ರಾಬಲ್ಯಕ್ಕೆ ಪುರಾವೆಯಾಗಿದೆ. ಒಂದು ಪಂದ್ಯ ಡ್ರಾ ಮಾಡಿಕೊಂಡಿತ್ತು. ಈ ತಂಡವು ಎಂಟರ ಘಟ್ಟದ ಪಂದ್ಯದಲ್ಲಿ ತಮಿಳುನಾಡು ತಂಡವನ್ನು 198 ರನ್‌ಗಳಿಂದ ಮತ್ತು ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು 80 ರನ್‌ಗಳಿಂದ ಸೋಲಿಸಿದೆ.
2017–18 ಮತ್ತು 2018–19ರಲ್ಲಿ ವಿಜೇತರಾಗಿದ್ದ ವಿದರ್ಭ ನಾಲ್ಕನೇ ಬಾರಿ ಫೈನಲ್‌ನಲ್ಲಿ ಆಡುತ್ತಿದೆ. ಕಳೆದ ವರ್ಷ ಫೈನಲ್‌ನಲ್ಲಿ ಮುಂಬೈಗೆ ಮಣಿದಿತ್ತು. ರೆಡ್‌ಬಾಲ್ ಕ್ರಿಕೆಟ್‌ನಲ್ಲಿ ಪಾರಮ್ಯ ಮೆರೆದಿರುವ ಈ ತಂಡ ಈ ವರ್ಷ ವಿಜಯ್ ಹಜಾರೆ ಟ್ರೋಫಿಯಲ್ಲೂ ಫೈನಲ್ ತಲುಪಿತ್ತು.
24 ವರ್ಷ ವಯಸ್ಸಿನ ಯಶ್ ರಾಥೋಡ್ ಅವರು ಬ್ಯಾಟಿಂಗ್‌ನಲ್ಲಿ ಮುಂಚೂಣಿಯಲ್ಲಿದ್ದು 9 ಪಂದ್ಯಗಳಿಂದ 58.13 ಸರಾಸರಿಯಲ್ಲಿ 933 ರನ್ ಪೇರಿಸಿದ್ದಾರೆ. ಇದರಲ್ಲಿ ಐದು ಶತಕಗಳು, ಮೂರು ಅರ್ಧ ಶತಕಗಳಿವೆ. ಅವರು ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಿಕೆಟ್ ಕೀಪರ್– ಕಪ್ತಾನ ವಾಡಕರ್ ಅವರು 48.14 ಸರಾಸರಿಯಲ್ಲಿ 674 ರನ್ ಹೊಡೆದಿದ್ದಾರೆ. ಕರ್ನಾಟಕ ತಂಡದಿಂದ ಇಲ್ಲಿಗೆ ಬಂದಿರುವ ಕರುಣ್ ನಾಯರ್ ಹಿಂದೆಬಿದ್ದಿಲ್ಲ. ಅವರು 642 ರನ್ ಸಂಗ್ರಹಿಸಿದ್ದಾರೆ. ಇವರ ಜೊತೆಗೆ ದಾನಿಶ್ ಮಾಲೇವಾರ್ (557) ಮತ್ತು ಧ್ರುವ್ ಶೋರೆ (446) ಅವರ ಕೊಡುಗೆ ನಿರ್ಲಕ್ಷಿಸುವಂತಿಲ್ಲ.
ಬೌಲಿಂಗ್ ವಿಭಾಗದಲ್ಲಿ 22 ವರ್ಷ ವಯಸ್ಸಿನ ಹರ್ಷ್ ದುಬೆ ಅವರು 66 ವಿಕೆಟ್ ಕಿತ್ತು ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಏಳು ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. 2018–19ರ ಸಾಲಿನಲ್ಲಿ 68 ವಿಕೆಟ್ ಕಬಳಿಸಿ ದಾಖಲೆ ಮಾಡಿದ್ದ ಬಿಹಾರದ ಅಶುತೋಷ್ ಅಮನ್ ಅವರ ದಾಖಲೆ ಮುರಿಯುವ ಹಾದಿಯಲ್ಲಿ ದುಬೆ ಇದ್ದಾರೆ.
ಒಂದೆಡೆ ವಿದರ್ಭದ ಸಾಧನೆ ಕಣ್ಣುಕುಕ್ಕುವಂತಿದ್ದರೆ, ಇನ್ನೊಂದೆಡೆ ಮೊದಲ ಬಾರಿ ಫೈನಲ್ ತಲುಪಿರುವ ಸಚಿನ್ ಬೇಬಿ ಸಾರಥ್ಯದ ಕೇರಳ ತಂಡಕ್ಕೆ ಈ ಹಾದಿಯಲ್ಲಿ ಅದೃಷ್ಟದ ಬಲವೂ ಇತ್ತು. ಎಂಟರ ಘಟ್ಟದ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಕೇವಲ ಎರಡು ರನ್ ಲೀಡ್ ಪಡೆದ ಆಧಾರದಲ್ಲಿ ಜಯಗಳಿಸಿದ್ದ ಕೇರಳ, ಸೆಮಿಫೈನಲ್‌ನಲ್ಲಿ ಒಂದು ರನ್ ಮುನ್ನಡೆ ಆಧಾರದಲ್ಲಿ ಫೈನಲ್ ಪ್ರವೇಶಿಸಿತ್ತು. ರೋಚಕ ಸ್ಥಿತಿಯಲ್ಲಿ ಒತ್ತಡದ ಸಂದರ್ಭಗಳನ್ನು ಯಶಸ್ವಿಯಾಗಿ ನಿಭಾಯಿಸಿತ್ತು.
ಆದರೆ ತಂಡದ ಕೆಚ್ಚಿನ ಹೋರಾಟ ಮರೆಯುವಂತಿಲ್ಲ. ಎರಡೂ ಪಂದ್ಯಗಳಲ್ಲಿ ಅದು ಪರಿಶ್ರಮದಿಂದ ಮುನ್ನಡೆ ಪಡೆದಿತ್ತು. ಸಲ್ಮಾನ್ ನಿಜರ್ (8 ಪಂದ್ಯಗಳಿಂದ 607, ಸರಾಸರಿ 86.71) ಮತ್ತು ಮೊಹಮ್ಮದ್ ಅಜರುದ್ದೀನ್ (9 ಪಂದ್ಯಗಳಿಂದ 601, ಸರಾಸರಿ 75.12) ಅವರ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.
ಆಫ್ ಸ್ಪಿನ್ನರ್ ಜಲಜ್ ಸಕ್ಸೇನ 38 ವಿಕೆಟ್ ಪಡೆದಿದ್ದು ಕೇರಳದ ಯಶಸ್ವಿ ಬೌಲರ್ ಎನಿಸಿದ್ದಾರೆ. ಈ ಹಿಂದೆ ವಿದರ್ಭ ತಂಡದಲ್ಲಿದ್ದ ಎಡಗೈ ಸ್ಪಿನ್ನರ್ ಆದಿತ್ಯ ಸರ್ವಟೆ 30 ವಿಕೆಟ್ ಪಡೆದಿದ್ದು ಸಕ್ಸೇನಾಗೆ ಬೆಂಬಲ ನೀಡಿದ್ದಾರೆ.
ಪಂದ್ಯ ಆರಂಭ: ಬೆಳಿಗ್ಗೆ 9.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.