ADVERTISEMENT

DNP- ಕೋವಿಡ್ ರೋಗಿಗಳ ನೆರವಿಗೆ ‘ಹನುಮ ಸೇತು’

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಗೆಳೆಯರ ಬಳಗ; ಔಷಧಿ, ಹಾಸಿಗೆ, ಆಮ್ಲಜನಕದ ಸಹಾಯ

ಪಿಟಿಐ
Published 14 ಮೇ 2021, 15:12 IST
Last Updated 14 ಮೇ 2021, 15:12 IST
ಹನುಮ ವಿಹಾರಿ –ಎಎಫ್‌ಪಿ ಚಿತ್ರ
ಹನುಮ ವಿಹಾರಿ –ಎಎಫ್‌ಪಿ ಚಿತ್ರ   

ನವದೆಹಲಿ: ಕೋವಿಡ್‌–19ರಿಂದ ಬಳಲುತ್ತಿರುವವರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ, ಔಷಧಿ, ಪ್ಲಾಸ್ಮಾ ಮತ್ತು ಆಮ್ಲಜನಕದ ಸಿಲಿಂಡರ್ ಒದಗಿಸಲು ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಹನುಮ ವಿಹಾರಿ ಗೆಳೆಯರ ಬಳಗದ ಜಾಲವೊಂದನ್ನು ಸ್ಥಾಪಿಸಿದ್ದಾರೆ.

ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವುದಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದ್ದ ಹನುಮ ವಿಹಾರಿ ಟ್ವಿಟರ್ ಖಾತೆಯ ಮೂಲಕ ಕೋವಿಡ್ ಪೀಡಿತರ ನೆರವಿಗೆ ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಗೆಳೆಯರನ್ನು ಒಳಗೊಂಡ ಗುಂಪೊಂದನ್ನು ರಚಿಸಿದ್ದಾರೆ. ಈ ಗುಂಪಿನವರು ರೋಗಿಗಳ ನೆರವಿಗೆ ಧಾವಿಸುತ್ತಿದ್ದಾರೆ.

ಭಾರತದಲ್ಲಿ ಕೋವಿಡ್‌ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವುದರ ಜೊತೆಯಲ್ಲೇ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ ಜನರಿಗೆ ನೆರವಾಗುವಲ್ಲಿ ಸಾಮಾಜಿಕ ತಾಣಗಳು ಮಹತ್ವದ ಪಾತ್ರ ವಹಿಸುತ್ತಿವೆ. ಕ್ರಿಕೆಟಿಗರ ಪೈಕಿ ಅನೇಕರು ಆರ್ಥಿಕ ನೆರವು ಸೇರಿದಂತೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ.

ADVERTISEMENT

‘ನನ್ನನ್ನು ನಾನು ವೈಭವೀಕರಿಸಿಕೊಳ್ಳಲು ಬಯಸುವುದಿಲ್ಲ. ತಳಮಟ್ಟದಲ್ಲಿರುವ ಜನರಿಗೆ ವೈದ್ಯಕೀಯ ಸೌಲಭ್ಯ ಮತ್ತು ನೆರವು ಸಿಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ಕೆ ಇಳಿದಿದ್ದೇನೆ. ಇದು ಆರಂಭವಷ್ಟೇ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಇನ್ನೂ ಪ್ರಯತ್ನಿಸುವೆ’ ಎಂದು 27 ವರ್ಷದ ಹನುಮ ವಿಹಾರಿ ಹೇಳಿದರು.

ಏಪ್ರಿಲ್ ಆರಂಭದಲ್ಲಿ ಇಂಗ್ಲೆಂಡ್‌ಗೆ ತೆರಳಿದ್ದ ಹನುಮ ವಿಹಾರಿ ಅವರು ಇಂಗ್ಲಿಷ್ ಕೌಂಟಿಯಲ್ಲಿ ವಾರ್ವಿಕ್‌ಶೈರ್ ತಂಡದ ಪರ ಆಡುತ್ತಿದ್ದಾರೆ. ಜೂನ್ ಮೂರರಂದು ಭಾರತ ತಂಡ ಇಂಗ್ಲೆಂಡ್‌ ತಲುಪಲಿದ್ದು ಹನುಮ ವಿಹಾರಿ ಅಂದು ತಂಡವನ್ನು ಸೇರಿಕೊಳ್ಳಲಿದ್ದಾರೆ.

‘ಪ್ಲಾಸ್ಮಾ, ಹಾಸಿ‌ಗೆ ಮತ್ತು ಔಷಧಿ ಪಡೆಯಲು ಅನುಕೂಲ ಇಲ್ಲದವರಿಗೆ ನೆರವಾಗುವುದು ನನ್ನ ಮುಖ್ಯ ಉದ್ದೇಶ. ಈಗಿನ ಪರಿಸ್ಥಿತಿಯಲ್ಲಿ ಇದು ಸಾಲದು ಎಂದೆನಿಸುತ್ತದೆ. ಆದ್ದರಿಂದ ಇನ್ನಷ್ಟು ಸೇವೆ ಸಲ್ಲಿಸಲು ಬಯಸಿದ್ದೇನೆ. ನೂರಕ್ಕೂ ಹೆಚ್ಚು ಮಂದಿ ವಾಟ್ಸಾಪ್ ಗ್ರೂಪ್‌ನಲ್ಲಿದ್ದಾರೆ. ಅವರೆಲ್ಲರೂ ರೋಗಿಗಳಿಗೆ ಸಹಾಯ ಮಾಡುತ್ತಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

ಹನುಮ ವಿಹಾರಿ ಈ ವರೆಗೆ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದು 624 ರನ್ ಕಲೆ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.