ADVERTISEMENT

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್‌: ಹಳೆ ಸ್ನೇಹಿತರ ಮುಖಾಮುಖಿ

ಕರ್ನಾಟಕ–ಗೋವಾ ಹಣಾಹಣಿ ಇಂದು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 19:58 IST
Last Updated 15 ಅಕ್ಟೋಬರ್ 2019, 19:58 IST
ಮನೀಷ್ ಪಾಂಡೆ
ಮನೀಷ್ ಪಾಂಡೆ   

ಬೆಂಗಳೂರು: ಮನೀಷ್ ಪಾಂಡೆ, ಅಭಿಮನ್ಯು ಮಿಥುನ್, ಅಮಿತ್ ವರ್ಮಾ, ಸಿ.ಎಂ.ಗೌತಮ್‌..

ಕೆಲವೇ ವರ್ಷಗಳ ಹಿಂದೆ ಈ ಎಲ್ಲ ಹೆಸರುಗಳು ಕರ್ನಾಟಕದ ತಂಡದ ಪಟ್ಟಿಯಲ್ಲಿದ್ದವು. ಆದರೆ ಇದೀಗ ಕಾಲ ಬದಲಾಗಿದೆ. ಈ ಹಳೆಯ ಸ್ನೇಹಿತರು ಎದುರಾಳಿಗಳಾಗಿ ಕಣಕ್ಕಿಳಿಯುತ್ತಿದ್ದಾರೆ.

ಬುಧವಾರ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕರ್ನಾಟಕ ಮತ್ತು ಗೋವಾ ತಂಡಗಳು ಮುಖಾಮುಖಿಯಾಗಲಿವೆ. ಮನೀಷ್ ಪಾಂಡೆ ಮತ್ತು ಅಮಿತ್ ವರ್ಮಾ ಅವರು ಕ್ರಮವಾಗಿ ಉಭಯ ತಂಡಗಳ ನಾಯಕರಾಗಿದ್ದಾರೆ.

ADVERTISEMENT

ಆಲ್‌ರೌಂಡರ್ ಅಭಿಮನ್ಯು ಮಿಥುನ್ ಕರ್ನಾಟಕದ ಬೌಲಿಂಗ್ ವಿಭಾಗದ ಸಾರಥ್ಯ ವಹಿಸಿದ್ದಾರೆ. ವಿಕೆಟ್‌ಕೀಪರ್ ಸಿ.ಎಂ. ಗೌತಮ್ ಗೋವಾ ತಂಡದಲ್ಲಿ ಈ ವರ್ಷದಿಂದ ಆಡುತ್ತಿದ್ದಾರೆ. ಗೋವಾ ತಂಡಕ್ಕೆ ಕನ್ನಡಿಗ ದೊಡ್ಡಗಣೇಶ್ ಮುಖ್ಯ ಕೋಚ್ ಆಗಿರುವುದು ವಿಶೇಷ.

ಈಗಾಗಲೇ ಕ್ವಾರ್ಟರ್‌ಫೈನಲ್ ಹಂತ ತಲುಪಿರುವ ಆತಿಥೇಯ ಬಳಗವು ಈ ಪಂದ್ಯದಲ್ಲಿ ಗೆದ್ದರೆ ತನ್ನ ಖಾತೆಯಲ್ಲಿ ಪಾಯಿಂಟ್‌ಗಳ ಸಂಖ್ಯೆ ಹೆಚ್ಚಿಸಿಕೊಳ್ಳಲಿದೆ.

ಕರ್ನಾಟಕ ಮತ್ತು ಪಂಜಾಬ್ ತಂಡಗಳು ತಲಾ 24 ಪಾಯಿಂಟ್ಸ್‌ ಗಳಿಸಿವೆ. ರನ್‌ರೇಟ್ ಆಧಾರದಲ್ಲಿ ಪಾಂಡೆ ಬಳಗವು ಮೊದಲ ಸ್ಥಾನದಲ್ಲಿದೆ. ಅದೇ ಸ್ಥಾನದಲ್ಲಿ ಮುಂದುವರೆಯುವ ಛಲದಲ್ಲಿದೆ.

ಗೋವಾ ತಂಡವು ಗುಂಪು ಹಂತದಲ್ಲಿ ಜಾರ್ಖಂಡ್ ಎದುರು ಮಾತ್ರ ಜಯಿಸಿದೆ. ಉಳಿದ ಪಂದ್ಯಗಳಲ್ಲಿ ಸೋತಿದೆ. ಆದ್ದರಿಂದ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ.

ಈ ಟೂರ್ನಿಯಲ್ಲಿ ತಲಾ ಒಂದು ಶತಕ ಹೊಡೆದಿರುವ ರಾಹುಲ್, ಪಾಂಡೆ ಮತ್ತು ದೇವದತ್ತ ಅವರ ಆಟದಿಂದಾಗಿ ಕರ್ನಾಟಕದ ಬ್ಯಾಟಿಂಗ್ ಬಲಶಾಲಿಯಾಗಿದೆ. ಅದರಲ್ಲೂ ಪಾಂಡೆ ಐದು ಅರ್ಧಶತಕಗಳನ್ನೂ ದಾಖಲಿಸಿ ಅಮೋಘ ಲಯದಲ್ಲಿದ್ದಾರೆ.

ಗೋವಾದ ಆದಿತ್ಯ ಕೌಶಿಕ್ ಕೂಡ ಶತಕ ಗಳಿಸಿರುವ ಪ್ರತಿಭಾವಂತ ಆಟಗಾರ.

ಕರ್ನಾಟಕದ ಪ್ರಸಿದ್ಧಕೃಷ್ಣ, ವಿ.ಕೌಶಿಕ್, ಮಿಥುನ್, ಕೆ. ಗೌತಮ್ ಮತ್ತು ಶ್ರೇಯಸ್ ಅವರ ಬೌಲಿಂಗ್ ಎದುರಿಸಿ ನಿಲ್ಲಲು ಗೋವಾ ಬ್ಯಾಟಿಂಗ್ ಪಡೆಯು ವಿಶೇಷ ಯೋಜನೆಯೊಂದಿಗೆ ಕಣಕ್ಕಿಳಿಯುವುದು ಅನಿವಾರ್ಯ. ಬಲಿಷ್ಠ ತಂಡವನ್ನು ಸೋಲಿಸಿದ ಸಮಾಧಾನದೊಂದಿಗೆ ಅಭಿಯಾನ ಮುಗಿಸುವ ಛಲದಲ್ಲಿರುವ ಗೋವಾ ತಂಡವು ಆತಿಥೇಯರಿಗೆ ಕಠಿಣ ಪೈಪೋಟಿಯೊಡ್ಡುವ ಒಡ್ಡುವ ಸಾಧ್ಯತೆ ಇದೆ.

ಪಂದ್ಯ ಆರಂಭ: ಬೆಳಿಗ್ಗೆ 9ರಿಂದ

ಸ್ಥಳ: ಕೆಎಸ್‌ಸಿಎ ಕ್ರೀಡಾಂಗಣ, ಆಲೂರು (3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.