ADVERTISEMENT

ವಿಜಯ್ ಹಜಾರೆ ಟ್ರೋಫಿ: ಬಿಹಾರ ಆಟಗಾರನಿಗೆ ಕೋವಿಡ್ ಸೋಂಕು

ಪಿಟಿಐ
Published 23 ಫೆಬ್ರುವರಿ 2021, 7:59 IST
Last Updated 23 ಫೆಬ್ರುವರಿ 2021, 7:59 IST
ಸಾಂದರ್ಭಿಕ ಚಿತ್ರ (ಕೃಪೆ: ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ: ಐಸ್ಟಾಕ್)   

ಮುಂಬೈ: ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಬಿಹಾರ ತಂಡದ ಆಟಗಾರರೊಬ್ಬರಿಗೆ ಕೋವಿಡ್–19 ಸೋಂಕು ತಗುಲಿರುವುದು ದೃಢಪಟ್ಟಿದೆ. ತಂಡದ ಇತರ ಆಟಗಾರರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

‘ಆಟಗಾರನಿಗೆ ಕೋವಿಡ್ ದೃಢಪಟ್ಟಿದೆ. ಆತನನ್ನು ಪ್ರತ್ಯೇಕ ವಾಸದಲ್ಲಿರಿಸಲಾಗಿದೆ. ಸೋಂಕಿತ ಆಟಗಾರ ಬೆಂಗಳೂರಿನಲ್ಲಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಂಡದ ಇತರ ಎಲ್ಲ ಆಟಗಾರರು ಇಂದೇ (ಮಂಗಳವಾರ) ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದು, ಸಂಜೆಯೊಳಗೆ ವರದಿ ಬರಲಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟು 22 ಆಟಗಾರರು ಪರೀಕ್ಷೆಗೆ ಒಳಗಾಗಲಿದ್ದಾರೆ.

ADVERTISEMENT

ಬಿಹಾರ ತಂಡವು ‘ಸಿ’ ಗುಂಪಿನಲ್ಲಿದ್ದು ಎಲ್ಲ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತಿವೆ. ಬುಧವಾರ ನಡೆಯಲಿರುವ ಪಂದ್ಯದಲ್ಲಿ ಬಿಹಾರವು ಉತ್ತರ ಪ್ರದೇಶವನ್ನು ಎದುರಿಸಲಿದೆ.

ಪಂದ್ಯವು ನಿಗದಿಯಂತೆಯೇ ನಡೆಯುವ ನಿರೀಕ್ಷೆ ಇದೆ ಎಂದು ಬಿಹಾರ ಕ್ರಿಕೆಟ್ ಸಂಘ (ಬಿಸಿಎ) ತಿಳಿಸಿದೆ.

ಬಿಹಾರ ತಂಡವು ಸೋಮವಾರವಷ್ಟೇ ಕರ್ನಾಟಕದ ವಿರುದ್ಧ 267 ರನ್ ಅಂತರದ ಸೋಲನುಭವಿಸಿತ್ತು. 'ಸಿ' ಗುಂಪಿನ ಎರಡನೇ ಪಂದ್ಯದಲ್ಲಿ ನಾಯಕ ರವಿಕುಮಾರ್ ಸಮರ್ಥ್ (158*) ಬಾರಿಸಿದ ಅಜೇಯ ಶತಕದ ನೆರವಿನೊಂದಿಗೆ ಕರ್ನಾಟಕ ತಂಡವು ಗೆಲುವು ಸಾಧಿಸಿತ್ತು.

ಮಹಾರಾಷ್ಟ್ರ ಹಾಗೂ ಹಿಮಾಚಲ ಪ್ರದೇಶದ ತಲಾ ಒಬ್ಬ ಆಟಗಾರರಲ್ಲಿ ಕಳೆದ ವಾರ ಕೋವಿಡ್–19 ಸೋಂಕು ದೃಢಪಟ್ಟಿತ್ತು. ತಂಡದ ಆಟಗಾರರನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ ಉಭಯ ತಂಡಗಳೂ ಪಂದ್ಯಗಳಲ್ಲಿ ಭಾಗವಹಿಸಿವೆ. ಮಹಾರಾಷ್ಟ್ರ ಹಾಗೂ ಹಿಮಾಚಲ ಪ್ರದೇಶ ತಂಡಗಳು ‘ಡಿ’ ಗುಂಪಿನಲ್ಲಿದ್ದು, ಜೈಪುರದಲ್ಲಿ ಪಂದ್ಯ ಆಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.