ಅಹಮದಾಬಾದ್: ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿರುವ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಅರುಣಾಚಲ ಪ್ರದೇಶ ತಂಡದ ಸವಾಲನ್ನು ಎದುರಿಸಲಿದೆ.
‘ಸಿ’ ಗುಂಪಿನಲ್ಲಿ ಅಜೇಯವಾಗಿರುವ ಮಯಂಕ್ ಅಗರವಾಲ್ ಪಡೆಯ ಆತ್ಮವಿಶ್ವಾಸದ ಮಟ್ಟ ಉತ್ತುಂಗದಲ್ಲಿದೆ. ಆಡಿರುವ ಮೂರೂ ಪಂದ್ಯಗಳನ್ನು ಗೆದ್ದು 12 ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯವನ್ನು ಜಯಿಸಿದರೆ ಕರ್ನಾಟಕಕ್ಕೆ ಅಗ್ರಸ್ಥಾನ ಮತ್ತಷ್ಟು ಗಟ್ಟಿಯಾಗಲಿದೆ. ಎಂಟು ತಂಡಗಳ ಗುಂಪಿನಲ್ಲಿ ಮುಂಬೈ, ಪಂಜಾಬ್, ಸೌರಾಷ್ಟ್ರ ಮತ್ತು ಪುದುಚೇರಿ ತಂಡಗಳು ತಲಾ ಎಂಟು ಅಂಕಗಳೊಂದಿಗೆ ಕ್ರಮವಾಗಿ ಕರ್ನಾಟಕದ ನಂತರದ ಸ್ಥಾನದಲ್ಲಿವೆ.
ಬಲಿಷ್ಠ ಮುಂಬೈ ತಂಡವನ್ನು ಹಣಿದು ಶುಭಾರಂಭ ಮಾಡಿದ್ದ ಕರ್ನಾಟಕ ತಂಡವು ನಂತರ ಪುದುಚೇರಿ ಮತ್ತು ಪಂಜಾಬ್ ತಂಡವನ್ನು ಸೋಲಿಸಿದೆ. ಮುಂಬೈ ಎದುರು ಕೆ.ಎಲ್. ಶ್ರೀಜಿತ್, ಪುದುಚೇರಿ ವಿರುದ್ಧ ಆರ್. ಸ್ಮರಣ ಹಾಗೂ ಪಂಜಾಬ್ ವಿರುದ್ಧ ಮಯಂಕ್ ಅಮೋಘ ಶತಕ ದಾಖಲಿಸಿದ್ದರು.
ಅರುಣಾಚಲ ಪ್ರದೇಶ ತಂಡವು ಆಡಿರುವ ಮೂರೂ ಪಂದ್ಯಗಳನ್ನು ಸೋತಿದ್ದು, ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದೆ. ನಬಮ್ ತಗನ್ ಅಬೊ ನಾಯಕತ್ವದ ತಂಡವು ಪಂಜಾಬ್, ಸೌರಾಷ್ಟ್ರ ಮತ್ತು ಮುಂಬೈ ತಂಡಗಳಿಗೆ ಸುಲಭ ತುತ್ತಾಗಿದೆ. ಆದರೆ, ಕರ್ನಾಟಕದ ವಿರುದ್ಧ ಗೆಲುವಿನ ಖಾತೆ ತೆರೆಯಲು ಎದುರು ನೋಡುತ್ತಿದೆ.
ಮೊದಲೆರಡು ಪಂದ್ಯಗಳನ್ನು ಹೆಚ್ಚು ಕಷ್ಟವಿಲ್ಲದೆ ಗೆದ್ದಿದ್ದ ಕರ್ನಾಟಕ ತಂಡವು ಪಂಜಾಬ್ ವಿರುದ್ಧ ಪ್ರಯಾಸ ಪಟ್ಟು ಜಯಿಸಿತ್ತು. ಮಯಂಕ್ ಏಕಾಂಗಿ ಹೋರಾಟ ನಡೆಸಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದರು. ಅಗ್ರಕ್ರಮಾಂಕದ ನಿಕಿನ್ ಜೋಸ್, ಕೆ.ವಿ. ಅನೀಶ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಅಭಿನವ್ ಮನೋಹರ್ ಅವರು ಲಯಕ್ಕೆ ಮರಳಿದರೆ ಬ್ಯಾಟಿಂಗ್ ವಿಭಾಗಕ್ಕೆ ಬಲ ಸಿಗಲಿದೆ.
ಅರುಣಾಚಲ ಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕದ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ಪುದುಚೇರಿ ವಿರುದ್ಧ ವಿದ್ಯಾಧರ ಪಾಟೀಲ ಮತ್ತು ಪಂಜಾಬ್ ವಿರುದ್ಧ ಅಭಿಲಾಷ್ ಶೆಟ್ಟಿ ನಾಲ್ಕು ವಿಕೆಟ್ ಸಾಧನೆ ಮಾಡಿದ್ದಾರೆ. ಅನುಭವಿ ಬೌಲರ್ ವೈಶಾಖ ವಿಜಯಕುಮಾರ್, ವಾಸುಕಿ ಕೌಶಿಕ್, ಶೇಯಸ್ ಗೋಪಾಲ್ ಅವರು ನೈಜ ಸಾಮರ್ಥ್ಯ ಪ್ರದರ್ಶಿಸಿದರೆ ಎದುರಾಳಿ ತಂಡವನ್ನು ಸುಲಭವಾಗಿ ಕಟ್ಟಿಹಾಕಬಹುದು.
ಪಂದ್ಯ ಆರಂಭ: ಬೆಳಿಗ್ಗೆ 9
(ಮಾಹಿತಿ: ಬಿಸಿಸಿಐ.ಟಿವಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.