ADVERTISEMENT

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿ: ಕರ್ನಾಟಕಕ್ಕೆ ಮಣಿದ ಮಿಜೋರಾಂ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 16:28 IST
Last Updated 5 ಡಿಸೆಂಬರ್ 2023, 16:28 IST
ವಿ.ಕೌಶಿಕ್ 
ವಿ.ಕೌಶಿಕ್    

ಅಹಮದಾಬಾದ್‌: ವಾಸುಕಿ ಕೌಶಿಕ್‌, ಕೃಷ್ಣಪ್ಪ ಗೌತಮ್‌ ಮತ್ತು ಮನೋಜ್‌ ಭಾಂಡಗೆ ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಕರ್ನಾಟಕ ತಂಡವು ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಮಿಜೋರಾಂ ವಿರುದ್ಧ ಗೆಲುವು ಸಾಧಿಸಿತು.

ಗುಜರಾತ್‌ ಕಾಲೇಜ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ 6 ವಿಕೆಟ್‌ಗಳಿಂದ ಮಿಜೋರಾಂ ತಂಡವನ್ನು ಮಣಿಸಿತು. ಆಡಿರುವ ಏಳು ಪಂದ್ಯಗಳ ಪೈಕಿ ಆರರಲ್ಲಿ ಗೆದ್ದು, 24 ಅಂಕಗಳೊಂದಿಗೆ ಕರ್ನಾಟಕ ತಂಡ ಎರಡನೇ ಸ್ಥಾನದಲ್ಲಿದೆ. ಹರಿಯಾಣ ತಂಡದ ಆಡಿರುವ ಏಳೂ ಪಂದ್ಯಗಳಲ್ಲಿ ಗೆದ್ದು ಅಗ್ರಸ್ಥಾನದಲ್ಲಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಮಿಜೋರಾಂ ತಂಡ, ಕರ್ನಾಟಕ ತಂಡದ ದಾಳಿಯೆದುರು 37.2 ಓವರ್‌ಗಳಲ್ಲಿ 124 ರನ್‌ಗೆ ಕುಸಿಯಿತು. 45 ರನ್‌ಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಜೋಸೆಫ್ ಲಾಲ್ತನ್ಖುಮಾ (37; 64ಎ, 4x2, 6x2) ಮತ್ತು ಕನ್ನಡಿಗ ಕೆ.ಸಿ.ಕಾರಿಯಪ್ಪ (36; 27ಎ, 4x2, 6x3) ಕೊಂಚ ಬಲ ತುಂಬಿದರು. ಕೌಶಿಕ್‌ 7 ರನ್‌ಗೆ 4 ವಿಕೆಟ್‌ ಪಡೆದು ಮಿಂಚಿದರು. ಮನೋಜ್‌ 19ಕ್ಕೆ 2 ಮತ್ತು ಗೌತಮ್‌ 49 ರನ್ನಿಗೆ 3 ವಿಕೆಟ್‌ ಪಡೆದರು.

ADVERTISEMENT

ಸುಲಭ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡದ ಆರಂಭದಲ್ಲೇ ಆಘಾತ ಎದುರಿಸಿತು. 24 ರನ್‌ ಗಳಿಸುವಷ್ಟರಲ್ಲಿ ಬಿ.ಆರ್‌.ಶರತ್‌ (2), ಅಭಿನವ್ ಮನೋಹರ್‌ (14), ಕೃಷ್ಣಪ್ಪ ಗೌತಮ್ (0) ಪೆವಿಲಿಯನ್‌ ಸೇರಿದ್ದರು. ಈ ಹಂತದಲ್ಲಿ ನಾಯಕ ಮಯಂಕ್‌ ಅಗರ್‌ವಾಲ್‌ (ಔಟಾಗದೆ 48; 42ಎ, 4x8) ಎಚ್ಚರಿಕೆಯ ಆಟವಾಡಿದರು. ಮತ್ತೊಂದೆಡೆ ಮನೋಜ್‌ ಭಾಂಡಗೆ 8 ಎಸೆತಗಳಲ್ಲಿ ಎರಡು ಸಿಕ್ಸರ್‌ ಮತ್ತು ಎರಡು ಬೌಂಡರಿ ಸೇರಿದಂತೆ 21 ರನ್‌ ಗಳಿಸಿ ಮೋಹಿತ್ ಜಾಂಗ್ರಾ ಅವರಿಗೆ ವಿಕೆಟ್‌ ಒಪ್ಪಿಸಿದರು. ನಂತರ ಬಂದ ಅನುಭವಿ ಮನೀಷ್‌ ಪಾಂಡೆ (ಔಟಾಗದೇ 38; 40ಎ, 4x2, 6x2) ಅವರು ಮಯಾಂಕ್‌ ಜತೆಗೂಡಿ 17 ಎಸೆತಗಳಿರುವಂತೆ ಗೆಲುವಿನ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರು

ಮಿಜೋರಾಂ: 37.2 ಓವರ್‌ಗಳಲ್ಲಿ 124 (ಜೋಸೆಫ್ ಲಾಲ್ತನ್ಖುಮಾ 37, ಕೆ.ಸಿ.ಕಾರಿಯಪ್ಪ 36; ವಿ. ಕೌಶಿಕ್‌ 7ಕ್ಕೆ 4, ಮನೋಜ್‌ ಭಾಂಡಗೆ 19ಕ್ಕೆ 2, ಕೆ. ಗೌತಮ್‌ 49ಕ್ಕೆ 3)

ಕರ್ನಾಟಕ: 17.1 ಓವರ್‌ಗಳಲ್ಲಿ 4 ವಿಕೆಟ್‌ಗೆ 126 (ಮಯಾಂಕ್‌ ಅಗರ್‌ವಾಲ್ ಔಟಾಗದೆ 48, ಮನೀಷ್‌ ಪಾಂಡೆ ಔಟಾಗದೇ 38; ಮೋಹಿತ್‌ ಜಾಂಗ್ರಾ 37ಕ್ಕೆ 3).

ಫಲಿತಾಂಶ: ಕರ್ನಾಟಕಕ್ಕೆ 6 ವಿಕೆಟ್‌ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.