ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಸತತ ಆರು ಪಂದ್ಯ ಸೋತು , ಬಳಿಕ ಆರು ಪಂದ್ಯ ಗೆದ್ದು ಪ್ಲೇ ಆಫ್ ಹಂತಕ್ಕೆ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಆರ್‌ಸಿಬಿ ಗೆಲುವಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಆರ್‌ಸಿಬಿಯ ಮಾಜಿ ಮಾಲೀಕ, ಉದ್ಯಮಿ ವಿಜಯ್ ಮಲ್ಯ ಸಹ ಆರ್‌ಸಿಬಿ ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ನಾನು ಆರ್‌ಸಿಬಿ ಫ್ರಾಂಚೈಸ್‌ಗಾಗಿ ಮತ್ತು ವಿರಾಟ್ ಕೊಹ್ಲಿಗಾಗಿ ಬಿಡ್ ಮಾಡಿದಾಗ ಇವಕ್ಕಿಂತ ಉತ್ತಮ ಆಯ್ಕೆಗಳನ್ನು ಮಾಡಲಾಗುತ್ತಿರಲಿಲ್ಲ ಎಂದು ನನ್ನ ಒಳಮನಸ್ಸು ಹೇಳುತ್ತಿತ್ತು. ಈಗ ನನ್ನ ಒಳಮನಸ್ಸು ಹೇಳುತ್ತಿದೆ ಆರ್‌ಸಿಬಿಗೆ ಕಪ್ ಗೆಲ್ಲುವ ಅತ್ಯುತ್ತಮ ಅವಕಾಶವಿದೆ ಎಂದು. ಮುನ್ನುಗ್ಗಿ, ಬೆಸ್ಟ್ ಆಫ್ ಲಕ್ ’ಎಂದು ಮಲ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಚೆನ್ನೈ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿ ಆರ್‌ಸಿಬಿ ಪ್ಲೇ ಆಫ್ ಹಂತ ತಲುಪಿದಾಗಲೂ ಮಲ್ಯ ಶುಭಾಶಯ ತಿಳಿಸಿದ್ದರು. ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸುವ ಮೂಲಕ ಐಪಿಎಲ್ ಪ್ಲೇ ಆಫ್ ತಲುಪಿದ ಆರ್‌ಸಿಬಿಗೆ ಹೃದಯಪೂರ್ವಕ ಶುಭಾಶಯಗಳು. ಅತ್ಯಂತ ನಿರಾಶಾದಾಯಕ ಆರಂಭದ ಬಳಿಕ ಛಲ ಮತ್ತು ಕೌಶಲ್ಯದಿಂದ ಕೂಡಿದ ಆಟದಿಂದ ತಂಡ ಜಯದ ಹಳಿಗೆ ಮರಳಲು ಸಾಧ್ಯವಾಗಿದೆ. ಟ್ರೋಫಿಯ ಮತ್ತಷ್ಟು ಸನಿಹಕ್ಕೆ ಬಂದಿದೆ’ ಎಂದು ಹೇಳಿದ್ದರು.
ಆರ್‌ಸಿಬಿ ಟ್ರೋಫಿ ಎತ್ತಿಹಿಡಿಯಲು 3 ಜಯದ ಅಗತ್ಯವಿದೆ. ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದರೆ, ಚೆನ್ನೈನಲ್ಲಿ ನಡೆಯಲಿರುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೆಣಸಲಿದೆ. ಅಲ್ಲಿಯೂ ಗೆಲುವು ಸಿಕ್ಕರೆ, ಫೈನಲ್‌ನಲ್ಲಿ ಕೋಲ್ಕತ್ತ ತಂಡ ಎದುರಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.