ವಿನೋದ್ ಕಾಂಬ್ಳಿ, ಸುನೀಲ್ ಗವಾಸ್ಕರ್
ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರಿಗೆ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಕ್ರಿಕೆಟ್ ವೀಕ್ಷಕ ವಿವರಣೆಗಾರ ಸುನೀಲ್ ಗವಾಸ್ಕರ್ (ಸನ್ನಿ) ಅವರು ನೆರವಿನ ಹಸ್ತ ಚಾಚಿದ್ದಾರೆ.
ಸುನೀಲ್ ಗವಾಸ್ಕರ್ ಅವರು ತಮ್ಮ ‘ಚಾಂಪ್’ ಫೌಂಡೇಶನ್‌ನಿಂದ ವಿನೋದ್ ಕಾಂಬ್ಳಿ ಅವರಿಗೆ ಪ್ರತಿ ತಿಂಗಳು ₹30 ಸಾವಿರ ಹಣಕಾಸಿನ ನೆರವು ನೀಡುವ ಕ್ರಮ ಕೈಗೊಂಡಿದ್ದಾರೆ ಎಂದು ದಿ ಹಿಂದೂಸ್ತಾನ್ ಟೈಮ್ಸ್ ವೆಬ್‌ಸೈಟ್ ವರದಿ ಮಾಡಿದೆ.
ಇತ್ತೀಚೆಗೆ ಸುನೀಲ್ ಗವಾಸ್ಕರ್ ಅವರು ವಿನೋದ್ ಕಾಂಬ್ಳಿ ಅವರನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಅನೌಪಚಾರಿಕವಾಗಿ ಭೇಟಿಯಾಗಿದ್ದರು. ಈ ಭೇಟಿಯ ನಂತರ ನಿರ್ಧಾರ ಹೊರಬಿದ್ದಿದೆ.
53 ವರ್ಷದ ವಿನೋದ್ ಕಾಂಬ್ಳಿ ಅವರು ಮೂತ್ರಕೋಶದ ಸೋಂಕು ಮತ್ತು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಅವರ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಕಂಡು ಬಂದಿದ್ದರಿಂದ ಅವರಿಗೆ ಹಣಕಾಸಿನ ತೊಂದರೆಯೂ ಎದುರಾಗಿದೆ. ಜನವರಿ 1ರಿಂದ ಠಾಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇತ್ತೀಚೆಗೆ ಸ್ವಲ್ಪ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಾಂಬ್ಳಿ ಅವರು 1993–2000 ರ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡದ ಪರವಾಗಿ 17 ಟೆಸ್ಟ್ ಪಂದ್ಯಗಳನ್ನು ಹಾಗೂ 104 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.