ADVERTISEMENT

ವಿರಾಟ್–ರಹಾನೆ ಜೊತೆಯಾಟದ ಆಸರೆ

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್: ಎರಡನೇ ದಿನದಾಟಕ್ಕೆ ಮಂದ ಬೆಳಕಿನ ಕಾಟ

ಪಿಟಿಐ
Published 19 ಜೂನ್ 2021, 22:10 IST
Last Updated 19 ಜೂನ್ 2021, 22:10 IST
ಅಜಿಂಕ್ಯ ರಹಾನೆ ಮತ್ತು ವಿರಾಟ್ ಕೊಹ್ಲಿ
ಅಜಿಂಕ್ಯ ರಹಾನೆ ಮತ್ತು ವಿರಾಟ್ ಕೊಹ್ಲಿ   

ಸೌತಾಂಪ್ಟನ್: ಏಜಿಸ್ ಬೌಲ್ ಕ್ರೀಡಾಂಗಣದಲ್ಲಿ ಶನಿವಾರ ಬೆಳಕು ಮಂದವಾಗುವ ಮುನ್ನ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ತಮ್ಮ ಲಯ ಕಂಡುಕೊಂಡರು.

ಇಲ್ಲಿ ಆರಂಭವಾದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ ಪಂದ್ಯದಲ್ಲಿ ನಾಯಕ ವಿರಾಟ್ (ಬ್ಯಾಟಿಂಗ್ 44) ಮತ್ತು ಉಪನಾಯಕ ರಹಾನೆ (ಬ್ಯಾಟಿಂಗ್ 29) ಭಾರತದ ಇನಿಂಗ್ಸ್‌ ನಲ್ಲಿ ಭರವಸೆಯ ಬೆಳಕು ಮೂಡಿಸಿದರು. ಈ ಜೋಡಿಯ ತಾಳ್ಮೆಯ ಆಟದಿಂದಾಗಿ ತಂಡವು 64.4 ಓವರ್‌ಗಳಲ್ಲಿ
3 ವಿಕೆಟ್‌ಗಳಿಗೆ 146 ರನ್ ಗಳಿಸಿತು.

ಶುಕ್ರವಾರ ಮಳೆಯಿಂದಾಗಿ ಮೊದಲ ದಿನದಾಟ ನಡೆದಿರಲಿಲ್ಲ. ಎರಡನೇ ದಿನವಾದ ಶನಿವಾರ ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ADVERTISEMENT

ಆದರೆ ದಿನದಾಟದಲ್ಲಿ 62 ಓವರ್‌ ಗಳ ಆಟ ಮುಗಿದಾಗ ಮಂದ ಬೆಳಕಿನ ಕಾರಣ ಸ್ಥಗಿತಗೊಳಿಸಲಾಗಿತ್ತು. ಚಹಾ ವಿರಾಮದ ನಂತರ ಆರಂಭಿಸಲಾಯಿತು. ಮತ್ತೆ 2.4 ಓವರ್‌ಗಳ ಆಟ ನಡೆಯಿತು. ಬೆಳಕಿನ ಕೊರತೆಯಿಂದಾಗಿ ಆಟ ನಿಲ್ಲಿಸ ಲಾಯಿತು. ನಂತರ ಮುಂದುವರಿಸ
ಲಾಗಲಿಲ್ಲ.

ರೋಹಿತ್ ಶರ್ಮಾ (34; 68ಎಸೆತ) ಮತ್ತು ಶುಭಮನ್ ಗಿಲ್ (28; 64ಎ) ಮೊದಲ ವಿಕೆಟ್‌ಗೆ 62 ರನ್‌ ಸೇರಿಸಿ ಉತ್ತಮ ಆರಂಭ ನೀಡಿದರು. ಆದರೆ 21ನೇ ಓವರ್‌ನಲ್ಲಿ ಕೈಲ್ ಜೆಮಿಸನ್ ಎಸೆತದಲ್ಲಿ ರೋಹಿತ್ ಔಟಾದರು.

ನಾಲ್ಕು ಓವರ್‌ಗಳ ನಂತರ ನೀಲ್ ವಾಗ್ನರ್ ಎಸೆತವನ್ನು ಆಡಲು ಯತ್ನಿಸಿದ ಯುವ ಬ್ಯಾಟ್ಸ್‌ಮನ್ ಗಿಲ್ ಅವರು ವಾಟ್ಲಿಂಗ್‌ಗೆ ಕ್ಯಾಚಿತ್ತರು. ಚೇತೇಶ್ವರ್ ಪೂಜಾರ ಜೊತೆಗೂಡಿದ ವಿರಾಟ್ ತಾಳ್ಮೆಯಿಂದ ಆಡಿದರು. ಪೂಜಾರ 54 ಎಸೆತಗಳಲ್ಲಿ 8 ರನ್ ಗಳಿಸಿದರು. ಟ್ರೆಂಟ್ ಬೌಲ್ಟ್‌ ಹಾಕಿದ 41ನೇ ಓವರ್‌ನಲ್ಲಿ ಪೂಜಾರ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆಗಿನ್ನೂ ತಂಡದ ಮೊತ್ತ ನೂರರ ಗಡಿಯನ್ನೂ ದಾಟಿರಲಿಲ್ಲ. ಈ ಹಂತದಲ್ಲಿ ಕೊಹ್ಲಿ ಜೊತೆಗೂಡಿದ ರಹಾನೆ ಇನಿಂಗ್ಸ್‌ಗೆ ಸ್ಥಿರತೆ ಒದಗಿಸಿದರು. ಇಬ್ಬರೂ ಮುರಿಯದ ನಾಲ್ಕನೇ ವಿಕೆಟ್ ಜೊತೆ ಯಾಟದಲ್ಲಿ 58 ರನ್‌ ಸೇರಿಸಿದರು. ಇನಿಂಗ್ಸ್‌ನಲ್ಲಿ ಮೂಡಿಬಂದ ಎರಡನೇ ಅರ್ಧಶತಕದ ಜೊತೆಯಾಟವಿದು.

ಮಿಲ್ಖಾ ಸಿಂಗ್‌ಗೆ ಗೌರವ: ಅಥ್ಲೀಟ್‌ ಮಿಲ್ಖಾ ಸಿಂಗ್ ಅವರ ಸ್ಮರಣಾರ್ಥ ಭಾರತ ಕ್ರಿಕೆಟ್ ತಂಡದ ಆಟಗಾರರು ತೋಳಿಗೆ ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದರು.

ವಿರಾಟ್ ಕೊಹ್ಲಿ ಸೇರಿದಂತೆ ಭಾರತದ ಪ್ರಮುಖ ಆಟಗಾರರು ಮತ್ತು ಕೋಚ್ ರವಿ ಶಾಸ್ತ್ರಿ ಈಗಾಗಲೇ ಮಿಲ್ಖಾ ಸಿಂಗ್‌ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಒಲಿಂಪಿಯನ್‌ ಕ್ರೀಡಾಪಟುವೊಬ್ಬರಿಗೆ ಭಾರತ ಕ್ರಿಕೆಟ್ ತಂಡವು ಕಪ್ಪುಪಟ್ಟಿ ಧರಿಸಿ ಗೌರವ ಸೂಚಿಸಿರುವುದು ಅಪರೂಪವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.