ADVERTISEMENT

ಕೊಹ್ಲಿ ಹ್ಯಾಟ್ರಿಕ್‌ ಶತಕ; ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸಿದ ವೆಸ್ಟ್ ಇಂಡೀಸ್‌

ಮೂರನೇ ಏಕದಿನ ಪಂದ್ಯ: ಶಾಯ್ ಹೋಪ್; ಆ್ಯಶ್ಲೆ ನರ್ಸ್‌ ಮಿಂಚು

ಪಿಟಿಐ
Published 27 ಅಕ್ಟೋಬರ್ 2018, 16:47 IST
Last Updated 27 ಅಕ್ಟೋಬರ್ 2018, 16:47 IST
ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ವೈಖರಿ
ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ವೈಖರಿ   

ಪುಣೆ: ಮತ್ತೊಮ್ಮೆ ಅಮೋಘ ಬ್ಯಾಟಿಂಗ್ ಮಾಡಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಶನಿವಾರ ದಾಖಲೆಯ ಶತಕ ಸಿಡಿಸಿದರು. ಆದರೆ ಎಲ್ಲ ವಿಭಾಗಗಳಲ್ಲೂ ಅಪೂರ್ವ ಸಾಮರ್ಥ್ಯ ಮೆರೆದ ವೆಸ್ಟ್ ಇಂಡೀಸ್‌ ಪಂದ್ಯದಲ್ಲಿ ಗೆದ್ದಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು.

ಮೂರನೇ ಏಕದಿನ ಪಂದ್ಯದಲ್ಲಿ 284 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಭಾರತ 240 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ವಿರಾಟ್ ಕೊಹ್ಲಿ (107; 119 ಎಸೆತ, 1 ಸಿಕ್ಸರ್‌, 10 ಬೌಂಡರಿ) ಸತತ ಮೂರನೇ ಶತಕ ಸಿಡಿಸಿ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡರು.

ಸವಾಲಿನ ಗುರಿ ಬೆನ್ನತ್ತಿದ ಭಾರತ ಒಂಬತ್ತು ರನ್‌ ಗಳಿಸಿದ್ದಾಗ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತು. ನಂತರ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ 79 ರನ್‌ ಸೇರಿಸಿದರು. ಶಿಖರ್ ಔಟಾದ ನಂತರ ಕೊಹ್ಲಿ ನಡೆಸಿದ ಏಕಾಂಗಿ ಹೋರಾಟಕ್ಕೆ ಫಲ ಸಿಗಲಿಲ್ಲ. ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ಮಿಂಚಲು ವಿಫಲರಾಗಿ ತಂಡದ ಸೋಲಿಗೆ ಕಾರಣರಾದರು.

ADVERTISEMENT

ಜಸ್‌ಪ್ರೀತ್ ಬೂಮ್ರಾ ಮಿಂಚು: ಮೊದಲ ಎರಡು ಪಂದ್ಯಗಳಲ್ಲಿ ಆಡಿದ ತಂಡದಲ್ಲಿ ಸ್ಥಾನ ಗಳಿಸಲು ವಿಫಲರಾಗಿದ್ದ ಜಸ್‌ಪ್ರೀತ್ ಬೂಮ್ರಾ ಪುಣೆಯಲ್ಲಿ ಮಿಂಚಿದರು. ಶತಕದತ್ತ ಹೆಜ್ಜೆ ಹಾಕಿದ್ದ ಶಾಯ್ ಹೋಪ್ ಸೇರಿದಂತೆ ವೆಸ್ಟ್ ಇಂಡೀಸ್‌ನ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಅವರು ಪೆವಿಲಿಯನ್‌ಗೆ ಕಳುಹಿಸಿದರು.

ಕಳೆದ ಪಂದ್ಯದಲ್ಲಿ ಭಾರತ ಮುಂದಿಟ್ಟ ಬೃಹತ್‌ ಮೊತ್ತವನ್ನು ದಿಟ್ಟವಾಗಿ ಬೆಂಬತ್ತಿ ಟೈ ಸಾಧಿಸಿದ್ದ ವೆಸ್ಟ್ ಇಂಡೀಸ್ ಶನಿವಾರ ಆರಂಭದಲ್ಲಿ ಆಘಾತಕ್ಕೆ ಒಳಗಾಯಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ತಂಡ 55 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತ್ತು. ಹೇಮರಾಜ್‌, ಕೀರನ್ ಪೊವೆಲ್ ಮತ್ತು ಮಾರ್ಲನ್ ಸ್ಯಾಮ್ಯುಯೆಲ್ಸ್‌ ಬೇಗನೇ ವಾಪಸಾದರು.

ಕಳೆದ ಪಂದ್ಯದಲ್ಲಿ ಭಾರತದ ಬೌಲರ್‌ಗಳನ್ನು ಕಾಡಿದ ಶಾಯ್ ಹೋಪ್ ಮತ್ತು ಶಿಮ್ರಾನ್‌ ಹೆಟ್ಮೆಯರ್‌ ಈ ಸಂದರ್ಭದಲ್ಲಿ ಜೊತೆಯಾದರು. ನಾಲ್ಕನೇ ವಿಕೆಟ್‌ಗೆ ಇವರಿಬ್ಬರು 56 ರನ್ ಸೇರಿಸಿ ಭಾರಿ ಮೊತ್ತ ಗಳಿಸುವ ಭರವಸೆ ಮೂಡಿಸಿದರು. ಭರ್ಜರಿ ಹೊಡೆತಗಳ ಮೂಲಕ ಮಿಂಚಿದ ಹೆಟ್ಮೆಯರ್‌ ಅವರನ್ನು ಕುಲದೀಪ್ ಯಾದವ್‌ ಔಟ್‌ ಮಾಡಿದರು. ಆದರೆ ಶಾಯ್ ಹೋಪ್‌ (95; 113 ಎಸೆತ, 3 ಸಿಕ್ಸರ್‌, 6 ಬೌಂಡರಿ) ಅವರ ಆಟ ಮುಂದುವರಿಯಿತು. ನಾಯಕ ಜೇಸಜ್ ಹೋಲ್ಡರ್ ಜೊತೆಗೂಡಿ ಅವರು 76 ರನ್ ಸೇರಿಸಿದರು.

ಈ ಜೋಡಿಯನ್ನು ಮುರಿದ ನಂತರ ಆ್ಯಶ್ಲೆ ನರ್ಸ್‌ 22 ಎಸೆತಗಳಲ್ಲಿ 40 ರನ್‌ ಗಳಿಸಿ ತಂಡವನ್ನು ಮುನ್ನೂರರ ಗಡಿಯತ್ತ ತಲುಪಿಸಿದರು. ಅವರ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.