ADVERTISEMENT

ಆರ್‌ಸಿಬಿ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ‘ವಿದಾಯ’

ಐಪಿಎಲ್‌ನಲ್ಲಿರುವಷ್ಟು ಕಾಲ ಬೆಂಗಳೂರು ತಂಡದಲ್ಲಿ ಆಡುತ್ತೆನೆ

ಪಿಟಿಐ
Published 12 ಅಕ್ಟೋಬರ್ 2021, 19:31 IST
Last Updated 12 ಅಕ್ಟೋಬರ್ 2021, 19:31 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಶಾರ್ಜಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಯುವಪ್ರತಿಭೆಗಳಿಗೆ ಅವಕಾಶ ನೀಡುವ ಸಂಪ್ರದಾಯವನ್ನು ರೂಢಿಸಿದ್ದೇನೆ. ಮುಂಬರುವ ನಾಯಕರೂ ಈ ಪದ್ಧತಿಯನ್ನು ಮುಂದುರಿಸಲಿ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಈ ಐಪಿಎಲ್ ಟೂರ್ನಿಯ ನಂತರ ತಂಡದ ನಾಯಕತ್ವ ಬಿಟ್ಟುಕೊಡುವುದಾಗಿ ಕೊಹ್ಲಿ ಹೇಳಿದ್ದರು. ಈ ಕುರಿತು ಭಾನುವಾರ ಅವರು ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಎಲಿಮಿನೇಟರ್ ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಒಂಬತ್ತು ವರ್ಷಗಳಿಂದ ವಿರಾಟ್ ತಂಡದ ನಾಯಕರಾಗಿದ್ದರು. 2008ರಿಂದಲೂ ಐಪಿಎಲ್‌ನಲ್ಲಿ ಆಡುತ್ತಿರುವ ಆರ್‌ಸಿಬಿ ಇದುವರೆಗೂ ಟ್ರೋಫಿ ಗೆದ್ದಿಲ್ಲ.

ADVERTISEMENT

‘ತಂಡದಲ್ಲಿ ಉತ್ತಮ ಸಂಸ್ಕತಿ ಮತ್ತು ಯುವಪ್ರತಿಭೆಗಳಿಗೆ ಭರಪೂರ ಅವಕಾಶ ನೀಡಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದೇನೆ. ನನ್ನ ಶ್ರೇಷ್ಠ ಸಾಮರ್ಥ್ಯವನ್ನು ಧಾರೆಯೆರೆದಿದ್ದೇನೆ. ಯುವಕರು ಮುಕ್ತ ಮನಸ್ಸು ಮತ್ತು ಆತ್ಮವಿಶ್ವಾಸದಿಂದ ಆಡುವಂತೆ ಪ್ರೋತ್ಸಾಹಿಸಿದ್ದೇನೆ. ಭಾರತ ತಂಡದಲ್ಲಿ ಪಾಲಿಸಿದ ಸಂಪ್ರದಾಯವನ್ನೇ ಇಲ್ಲಿಯೂ ಅನುಸರಿಸುವ ಪ್ರಯತ್ನ ಮಾಡಿದ್ದೇನೆ’ ಎಂದು ಕೊಹ್ಲಿ ಹೇಳಿದ್ದಾರೆ.

‘ನಾಯಕತ್ವ ತೊರೆದ ನಂತರವೂ ಆರ್‌ಸಿಬಿಯಲ್ಲಿಯೇ ಆಡುತ್ತೇನೆ. ಬೇರೆ ತಂಡದಲ್ಲಿ ಆಡುವ ಯೋಚನೆ ನನಗಿಲ್ಲ. ನಿಷ್ಠೆ, ಪ್ರಾಮಾಣಿಕತೆ ನನಗೆ ಮಹತ್ವದ್ದು. ಐಪಿಎಲ್‌ನಲ್ಲಿ ಆಡುವಷ್ಟು ಕಾಲವೂ ಆರ್‌ಸಿಬಿಯಲ್ಲಿಯೇ ಇರುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಎಲಿಮಿನೇಟರ್ ಪಂದ್ಯದ ಸೋಲಿನ ಕುರಿತು ಪ್ರತಿಕ್ರಿಯಿಸಿದ ಅವರು, ‘ಪಂದ್ಯದ ಮಧ್ಯದಲ್ಲಿ ಕೆಕೆಆರ್ ಸ್ಪಿನ್ನರ್‌ಗಳು ಪ್ರಾಬಲ್ಯ ಮೆರೆದರು. ಸುನೀ್ಲ್‌ ನಾರಾಯಣ್ ಆಲ್‌ರೌಂಡ್ ಮತ್ತು ಶಕೀಬ್ ಅಲ್ ಹಸನ್, ವರುಣ್ ಚಕ್ರವರ್ತಿಯವರ ಬಿಗಿದಾಳಿಯು ನಮ್ಮ ಬ್ಯಾಟಿಂಗ್‌ ಪಡೆ ಮೇಲೆ ಒತ್ತಡ ಹೆಚ್ಚಿಸಿತು’ ಎಂದರು.

‘ಪಂದ್ಯದಲ್ಲಿ ನಾವು ಸುಲಭವಾಗಿ ಶರಣಾಗಲಿಲ್ಲ. ಕೊನೆಯ ಓವರ್‌ನವರೆಗೂ ಹೋರಾಟ ಮಾಡಿದೆವು. ನಮ್ಮ ಆಟಗಾರರ ಛಲವೇ ಈ ತಂಡದ ಪ್ರಮುಖ ಗುಣ’ ಎಂದರು.

ಗೆಳೆಯನ ಶ್ಲಾಘಿಸಿದ ಎಬಿಡಿ

ಆರ್‌ಸಿಬಿ ತಂಡದ ಮೇಲೆ ತಾವು ರೂಪಿಸಿರುವ ಪ್ರಭಾವಳಿಯನ್ನು ಸ್ವತಃ ವಿರಾಟ್ ಕೊಹ್ಲಿಯವರಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ ಹೇಳಿದ್ದಾರೆ.

‘ವಿರಾಟ್ ನಾಯಕತ್ವದ ವಹಿಸಿಕೊಂಡಾಗಿನಿಂದಲೂ ನಾನು ಅವರೊಂದಿಗಿದ್ದೇನೆ. ಈ ಕ್ಷಣದಲ್ಲಿ ನನಗೆ ಹೊಳೆಯುವ ಏಕೈಕ ಪದವೆಂದರೆ ‘ಅದ್ಭುತ’ ಎಂಬುದೊಂದೆ ಆಗಿದೆ. ತಮ್ಮಂತಹ ನಾಯಕನನ್ನು ಪಡೆದಿದ್ದು ನಮ್ಮ ಅದೃಷ್ಟ’ ಎಂದು ಎಬಿಡಿ ವಿಡಿಯೊದಲ್ಲಿ ಹೇಳಿದ್ದಾರೆ.

‘ವಿರಾಟ್ ನಾಯಕತ್ವದ ಶೈಲಿಯು ನಾನು ಒಬ್ಬ ಉತ್ತಮ ವ್ಯಕ್ತಿಯಾಗಿ, ಆಟಗಾರನಾಗಿ ಬೆಳೆಯಲು ನೆರವಾಗಿದೆ’ ಎಂದು ದಕ್ಷಿಣ ಆಫ್ರಿಕಾದ ಎಬಿಡಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.