ADVERTISEMENT

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯ: ವಿರಾಟ್ ಬ್ಯಾಟಿಂಗ್‌ನತ್ತ ಎಲ್ಲರ ಕಣ್ಣು

ಭಾರತ ತಂಡಕ್ಕೆ ಕನ್ನಡಿಗ ರಾಹುಲ್ ಸಾರಥ್ಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 19:30 IST
Last Updated 18 ಜನವರಿ 2022, 19:30 IST
ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ
ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ   

ಪಾರ್ಲ್, ದಕ್ಷಿಣ ಆಫ್ರಿಕಾ: ಬುಧವಾರ ಇಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಕ್ರಿಕೆಟ್ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ವೃತ್ತಿಜೀವನದ ಮಹತ್ವದ ಘಟ್ಟ ಆರಂಭವಾಗಲಿದೆ.

ವಿರಾಟ್ ಮೂರು ಮಾದರಿಯ ಕ್ರಿಕೆಟ್‌ ತಂಡಗಳ ನಾಯಕತ್ವದಿಂದ ಕೆಳಗಿಳಿದ ನಂತರ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿರುವ ಮೊದಲ ಪಂದ್ಯ ಇದು. ಆದ್ದರಿಂದಲೇ ಎಲ್ಲರ ಕುತೂಹಲದ ಕಣ್ಣುಗಳು ಅವರತ್ತ ನೆಟ್ಟಿವೆ. ಕನ್ನಡಿಗ ಕೆ.ಎಲ್. ರಾಹುಲ್ ಮೊದಲ ಬಾರಿಗೆ ಸೀಮಿತ ಓವರ್‌ಗಳ ಕ್ರಿಕೆಟ್‌ನ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಆದರೆ ನಾಲ್ಕು ದಿನಗಳ ಹಿಂದಷ್ಟೇ ಟೆಸ್ಟ್‌ ಕ್ರಿಕೆಟ್ ತಂಡದ ನಾಯಕತ್ವಕ್ಕೆ ದಿಢೀರ್ ರಾಜೀನಾಮೆ ನೀಡಿರುವ ವಿರಾಟ್ ಕುರಿತ ಚರ್ಚೆಗಳು ನಡೆಯುತ್ತಿವೆ. ತಂಡವು ದಕ್ಷಿಣ ಆಫ್ರಿಕಾಕ್ಕೆ ಬರುವ ಮುನ್ನ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ವಿರಾಟ್ ಅವರನ್ನು ಕೆಳಗಿಳಿಸಲಾಗಿತ್ತು.

ADVERTISEMENT

ಅಲ್ಲದೇ ಕಳೆದೆರಡು ವರ್ಷಗಳಿಂದ ತಮ್ಮ ಬ್ಯಾಟಿಂಗ್‌ನಲ್ಲಿಯೂ ಅವರು ಮಿಂಚಿಲ್ಲ. ಈ ಅವಧಿಯಲ್ಲಿ ಅವರು ಒಂದೂ ಶತಕ ಬಾರಿಸಿಲ್ಲ. ಆದ್ದರಿಂದ ಬೋಲ್ಯಾಂಡ್ ಪಾರ್ಕ್‌ನಲ್ಲಿ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಅವರ ಮೇಲೆ ಹಲವು ನಿರೀಕ್ಷೆಗಳು ಇವೆ. 254 ಏಕದಿನ ಪಂದ್ಯಗಳನ್ನು ಆಡಿರುವ ದೆಹಲಿಯ ಬ್ಯಾಟರ್ ತಂಡದ ಗೆಲುವಿಗೆ ಯಾವ ರೀತಿಯ ಕಾಣಿಕೆ ಕೊಡಲಿದ್ದಾರೆಂಬ ಕುತೂಹಲ ಗರಿಗೆದರಿದೆ.

ಈ ಸರಣಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಬೇಕಿತ್ತು. ಆದರೆ ಗಾಯಗೊಂಡಿರುವ ಅವರು ದಕ್ಷಿಣ ಆಫ್ರಿಕಾಕ್ಕೆ ತೆರಳಿಲ್ಲ. ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ಪೂರ್ವಸಿದ್ಧತೆಯ ಭಾಗವಾಗಿಯೂ ಈ ಸರಣಿ ಮಹತ್ವ ಪಡೆದುಕೊಂಡಿದೆ. ಹೋದ ಮಾರ್ಚ್‌ ತಿಂಗಳಲ್ಲಿ ಭಾರತದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಏಕದಿನ ಸರಣಿಯಲ್ಲಿ ಭಾರತ ತಂಡವು ಆಡಿತ್ತು.

ತಂಡದ ಆಯ್ಕೆಯ ಕಸರತ್ತು: ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರಾಹುಲ್ ಮುಂದೆ ಅಂತಿಮ ಹನ್ನೊಂದು ಆಟಗಾರರನ್ನು ಆಯ್ಕೆ ಮಾಡುವ ಸವಾಲು ಇದೆ.

ದೇಶಿ ಟೂರ್ನಿಗಳು ಮತ್ತು ಐಪಿಎಲ್‌ನಲ್ಲಿ ಮಿಂಚಿರುವ ಬ್ಯಾಟರ್ ಋತುರಾಜ್ ಗಾಯಕವಾಡ್, ವೆಂಕಟೇಶ್ ಅಯ್ಯರ್ ಅವರಿಗೆ ಪದಾರ್ಪಣೆ ಅವಕಾಶ ಸಿಗುವುದು ಖಚಿತವಿಲ್ಲ. ಏಕೆಂದರೆ, ರಾಹುಲ್ ಜೊತೆಗೆ ಇನಿಂಗ್ಸ್‌ ಆರಂಭಿಸಲು ಅನುಭವಿ ಶಿಖರ್ ಧವನ್ ಇದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಇದ್ದಾರೆ. ವೇಗಿಗಳಿಗೆ ಹೆಚ್ಚು ನೆರವು ನೀಡುವ ಇಲ್ಲಿಯ ಪಿಚ್‌ಗಳಲ್ಲಿ ಬೌಲಿಂಗ್ ಆಲ್‌ರೌಂಡರ್‌ ಆಡುವುದು ಅಗತ್ಯವಾದರೆ, ವೆಂಕಟೇಶ್ ಅಯ್ಯರ್ ಮತ್ತು ಶಾರ್ದೂಲ್ ಠಾಕೂರ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬಹುದು. ಅನುಭವಿ ಭುವನೇಶ್ವರ್ ಕುಮಾರ್ ಮೇಲೆ ಬೌಲಿಂಗ್ ವಿಭಾಗದ ಹೊಣೆ ಬೀಳಲಿದೆ. ಕಳೆದ ಬಾರಿ ಭಾರತವು ದಕ್ಷಿಣ ಆಫ್ರಿಕಾ ತಂಡವನ್ನು 5–1ರಿಂದ ಸೋಲಿಸಿತ್ತು.

ಆದರೆ, ಈಚೆಗೆ 1–2ರಿಂದ ಟೆಸ್ಟ್‌ ಸರಣಿಯಲ್ಲಿ ಸೋತಿರುವ ಭಾರತಕ್ಕೆ ಆತಿಥೇಯ ತಂಡದ ಮಾರ್ಕೊ ಜ್ಯಾನ್ಸೆನ್, ಲುಂಗಿ ಗಿಡಿ ಮತ್ತು ಕಗಿಸೊ ರಬಾಡ ಅವರ ಸವಾಲು ಎದುರಾಗಲಿದೆ. ನಾಯಕ ತೆಂಬಾ ಬವುಮಾ, ಜುಬೇರ್ ಹಮ್ಜಾ, ಕ್ವಿಂಟನ್ ಡಿಕಾಕ್ ಮತ್ತು ಏಡನ್ ಮರ್ಕರಂ ಅವರಿಂದಾಗಿ ಬ್ಯಾಟಿಂಗ್ ಕ್ರಮಾಂಕವು ಬಲಿಷ್ಠವಾಗಿದೆ.

ತಂಡಗಳು:

ಭಾರತ: ಕೆ.ಎಲ್. ರಾಹುಲ್ (ನಾಯಕ), ಜಸ್‌ಪ್ರೀತ್ ಬೂಮ್ರಾ, ಶಿಖರ್ ಧವನ್, ಋತುರಾಜ್ ಗಾಯಕವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ಯಜುವೇಂದ್ರ ಚಾಹಲ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್, ನವದೀಪ್ ಸೈನಿ.

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಕೇಶವ್ ಮಹಾರಾಜ, ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಜುಬೇರ್ ಹಮ್ಜಾ, ಮಾರ್ಕೊ ಜ್ಯಾನ್ಸೆನ್, ಜೆನ್‌ಮನ್ ಮಲಾನ್, ಸಿಸಾಂದಾ ಮಗಾಲ, ಏಡನ್ ಮರ್ಕರಮ್, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ವೇಯ್ನ ಪಾರ್ನೆಲ್, ಆ್ಯಂಡಿಲ್ ಪಿಶುವಾಯೊ, ಡ್ವೇನ್ ಪ್ರಿಟೊರಿಯಸ್, ಕಗಿಸೊ ರಬಾಡ, ತಬ್ರೇಜ್ ಶಮ್ಸಿ, ರಸಿ ವ್ಯಾನ್ ಡರ್ ಡಸೆನ್, ಕೈಲ್ ವೆರೆಯನ್

ಪಂದ್ಯ ಆರಂಭ: ಮಧ್ಯಾಹ್ನ 2ರಿಂದ ನೇರಪ್ರಸಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.