ADVERTISEMENT

ಐಸಿಸಿ ಬ್ಯಾಟರ್‌ಗಳ ಏಕದಿನ ರ‍್ಯಾಂಕಿಂಗ್‌: ಎರಡನೇ ಸ್ಥಾನದಲ್ಲಿ ಕೊಹ್ಲಿ

ಪಿಟಿಐ
Published 26 ಜನವರಿ 2022, 13:40 IST
Last Updated 26 ಜನವರಿ 2022, 13:40 IST
ವಿರಾಟ್ ಕೊಹ್ಲಿ- ಪಿಟಿಐ ಚಿತ್ರ
ವಿರಾಟ್ ಕೊಹ್ಲಿ- ಪಿಟಿಐ ಚಿತ್ರ   

ದುಬೈ: ಭಾರತ ತಂಡದ ಆಟಗಾರ ವಿರಾಟ್‌ ಕೊಹ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಬ್ಯಾಟರ್‌ಗಳಏಕದಿನ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯ ಬಳಿಕ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದ ವಿರಾಟ್‌, ಏಕದಿನ ಸರಣಿಯಲ್ಲಿ ಉತ್ತಮವಾಗಿ ಆಡಿದ್ದರು. ದಕ್ಷಿಣ ಆಫ್ರಿಕಾ ಎದುರಿನ ಮೂರು ಏಕದಿನ ಪಂದ್ಯಗಳಲ್ಲಿ ಎರಡು ಅರ್ಧಶತಕಗಳು ಸೇರಿ 116 ರನ್‌ ಕಲೆಹಾಕಿದ್ದರು.

ಭಾರತಸೀಮಿತ ಓವರ್‌ಗಳ ತಂಡದ ನಾಯಕ, ಅನುಭವಿ ಬ್ಯಾಟರ್‌ ರೋಹಿತ್‌ ಶರ್ಮಾ ಅವರು ಮೂರನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಗಾಯದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಅವರು ಆಡಿರಲಿಲ್ಲ.

ADVERTISEMENT

ಕೊಹ್ಲಿ ಬಳಿ 836 ರೇಟಿಂಗ್‌ ಪಾಯಿಂಟ್‌ಗಳಿದ್ದರೆ, ರೋಹಿತ್ 801 ಪಾಯಿಂಟ್ಸ್ ಕಲೆಹಾಕಿದ್ದಾರೆ. ಈ ವಿಭಾಗದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ಅಗ್ರಸ್ಥಾನದಲ್ಲಿದ್ದು, ಅವರ ಬಳಿ 873 ಪಾಯಿಂಟ್‌ಗಳಿವೆ. ದಕ್ಷಿಣ ಆಫ್ರಿಕಾದ ವ್ಯಾನ್ ಡರ್‌ ಡಸೆನ್‌ 10ನೇ ಕ್ರಮಾಂಕದಲ್ಲಿ ಮತ್ತು ಕ್ವಿಂಟನ್ ಡಿಕಾಕ್‌ ಐದನೇ ಸ್ಥಾನಗಳಲ್ಲಿದ್ದಾರೆ.

ಬೌಲರ್‌ಗಳ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಲುಂಗಿ ಗಿಡಿ ಮತ್ತು ಕೇಶವ್ ಮಹಾರಾಜ್ ಬಡ್ತಿ ಪಡೆದಿದ್ದಾರೆ. ನಾಲ್ಕು ಸ್ಥಾನ ಏರಿಕೆ ಕಂಡಿರುವ ಗಿಡಿ 20ನೇ ಸ್ಥಾನದಲ್ಲಿದ್ದರೆ, ಮಹಾರಾಜ್‌ 33ನೇ ಕ್ರಮಾಂಕದಲ್ಲಿದ್ದಾರೆ. ಭಾರತದ ಭುವನೇಶ್ವರ ಕುಮಾರ್ 22ನೇ ಸ್ಥಾನಕ್ಕೆ ಜಾರಿದ್ದಾರೆ. ಈ ವಿಭಾಗದಲ್ಲಿ ನ್ಯೂಜಿಲೆಂಡ್‌ನ ಟ್ರೆಂಟ್‌ ಬೌಲ್ಟ್ ಮೊದಲ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.