ನವದೆಹಲಿ: 'ಒಂದು ಯುಗದ ಅಂತ್ಯ' ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ದಿಗ್ಗಜ ಕ್ರಿಕೆಟಿಗನನ್ನು ಹಾಡಿ ಹೊಗಳಿರುವ ಖ್ಯಾತ ಕ್ರಿಕೆಟಿಗರು, ಬಿಸಿಸಿಐ ಮತ್ತು ಐಸಿಸಿ ಅಭೂತಪೂರ್ವ ಗೌರವ ಸಲ್ಲಿಸಿವೆ.
14 ವರ್ಷಗಳ ಟೆಸ್ಟ್ ಕ್ರಿಕೆಟ್ ವೃತ್ತಿಜೀವನಕ್ಕೆ ಭಾರತದ ಬ್ಯಾಟಿಂಗ್ ಮಾಂತ್ರಿಕ ವಿರಾಟ್ ಕೊಹ್ಲಿ ಇಂದು ವಿದಾಯ ಘೋಷಿಸಿದ್ದಾರೆ. ಇನ್‌ಸ್ಟಾ ಗ್ರಾಂ ಪೋಸ್ಟ್ ಮೂಲಕ ಅವರು ಮಾಹಿತಿ ಹಂಚಿಕೊಂಡಿದ್ಧಾರೆ.
36 ವರ್ಷದ ಕೊಹ್ಲಿ 123 ಟೆಸ್ಟ್ ಪಂದ್ಯಗಳಿಂದ 46.85 ಸರಾಸರಿಯಲ್ಲಿ 30 ಶತಕಗಳೊಂದಿಗೆ 9,230 ರನ್ ಗಳಿಸಿದ್ದಾರೆ. ಕಳೆದ ವರ್ಷ ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಅವರು ಈಗ ಏಕದಿನ ಕ್ರಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಯುಗಾಂತ್ಯವಾಗಿದೆ. ಆದರೆ, ಅವರ ಪರಂಪರೆ ಶಾಶ್ವತವಾಗಿ ಮುಂದುವರಿಯುತ್ತದೆ! ಎಂದು ಬಿಸಿಸಿಐ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
‘#TeamIndiaಗೆ ಅವರ ಕೊಡುಗೆಗಳನ್ನು ಸದಾಕಾಲ ಸ್ಮರಿಸಲಾಗುವುದು!’ ಎಂದೂ ತಿಳಿಸಿದೆ.
ವಿರಾಟ್ ಕೊಹ್ಲಿ ಭಾರತದ ಟೆಸ್ಟ್ ಶ್ರೇಷ್ಠರಲ್ಲಿ ಒಬ್ಬರು ಎಂದು ಐಸಿಸಿ ಶ್ಲಾಘಿಸಿದೆ.
‘ವಿರಾಟ್ ಕೊಹ್ಲಿ ಭಾರತದ ಟೆಸ್ಟ್ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸಾಟಿಯಿಲ್ಲದ ಪರಂಪರೆಯನ್ನು ಅವರು ಬಿಟ್ಟು ಹೋಗಿದ್ದಾರೆ’ ಎಂದು ಐಸಿಸಿ ಹೇಳಿದೆ.
ಐಪಿಎಲ್‌ನಲ್ಲಿ ಕೊಹ್ಲಿ ಪ್ರತಿನಿಧಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ತಮ್ಮ ಸ್ಟಾರ್ ಆಟಗಾರ ಮತ್ತು ಮಾಜಿ ನಾಯಕನನ್ನು ಟೆಸ್ಟ್ ರಂಗದಿಂದ ಮಿಸ್ ಮಾಡಿಕೊಳ್ಳುವುದಾಗಿ ಹೇಳಿದೆ.
‘ಅವರ ವಾಕಿಂಗ್ ಶೈಲಿ, ಅಮೋಘ ಹೊಡೆತಗಳು, ಅವರ ಎಕ್ಸ್‌ಪ್ರೆಶನ್, ಅವರ ಸೆಲೆಬ್ರೇಶನ್ ಎಲ್ಲವನ್ನೂ ನಾವು ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ಆರ್‌ಸಿಬಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
'ಒಂದು ಸ್ಮರಣೀಯ ಟೆಸ್ಟ್ ಯುಗಕ್ಕೆ ತೆರೆ ಬಿದ್ದಿದೆ. ಆದರೆ, ಅವರ ಪರಂಪರೆ ಜೀವಂತವಾಗಿರುತ್ತದೆ. ಥ್ಯಾಂಕ್ ಯೂ ವಿರಾಟ್ ಕೊಹ್ಲಿ, ಅವರ ಆಟದ ಧೈರ್ಯ ಮತ್ತು ಅಪ್ರತಿಮ ಉತ್ಸಾಹಕ್ಕಾಗಿ ಧನ್ಯವಾದಗಳು. ನೀವು ಟೆಸ್ಟ್ ಕ್ರಿಕೆಟ್ ಕೇವಲ ಆಡಿದ್ದಲ್ಲ. ಈ ಮಾದರಿಯ ಕ್ರಿಕೆಟ್ ಅನ್ನೇ ಉನ್ನತೀಕರಿಸಿದ್ದೀರಿ’ ಎಂದು ಬರೆದುಕೊಂಡಿದೆ.
‘ನಿಮ್ಮೊಂದಿಗೆ ಮೈದಾನ ಹಂಚಿಕೊಂಡಿದ್ದು ವಿಶೇಷ ಪ್ರಯಾಣವಾಗಿ. ತುಂಬಾ ಒಳ್ಳೆಯ ನೆನಪುಗಳು ಮತ್ತು ಉತ್ತಮ ಪಾಲುದಾರಿಕೆಗಳ ನೆನಪುಗಳು ನನ್ನ ಬಳಿ ಇವೆ. ನಿಮ್ಮ ಅದ್ಭುತ ಟೆಸ್ಟ್ ವೃತ್ತಿಜೀವನಕ್ಕೆ ಅಭಿನಂದನೆಗಳು!’ ಎಂದು ಅವರ ಮಾಜಿ ಸಹ ಆಟಗಾರ ಅಜಿಂಕ್ಯ ರಹಾನೆ ಬರೆದುಕೊಂಡಿದ್ದಾರೆ.
ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಕೊಹ್ಲಿಯನ್ನು ‘ಭಾರತದ ಆಧುನಿಕ ಟೆಸ್ಟ್ ಕ್ರಿಕೆಟ್‌ನ ನಿಜವಾದ ಜ್ಯೋತಿ ಧಾರಕ’ ಎಂದು ಬಣ್ಣಿಸಿದ್ದಾರೆ.
ವಿರಾಟ್ ಕೊಹ್ಲಿ, ಅದ್ಭುತ ಟೆಸ್ಟ್ ವೃತ್ತಿಜೀವನಕ್ಕೆ ಅಭಿನಂದನೆಗಳು. ನಾಯಕನಾಗಿ, ನೀವು ಕೇವಲ ಪಂದ್ಯಗಳನ್ನು ಗೆಲ್ಲಲಿಲ್ಲ. ನೀವು ಆಟದ ಮನಸ್ಥಿತಿಯನ್ನು ಬದಲಾಯಿಸಿದ್ದೀರಿ. ನೀವು ಫಿಟ್‌ನೆಸ್, ಆಕ್ರಮಣಶೀಲತೆ ಮತ್ತು ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಹೊಸ ಮಾನದಂಡವನ್ನು ರೂಪಿಸಿದ್ದೀರಿ ಎಂದು ಕೊಂಡಾಡಿದ್ದಾರೆ.
ನಿಮ್ಮ ನಿವೃತ್ತಿಯನ್ನು ಅಂಗೀಕರಿಸಲು ನಾವು ಸಿದ್ಧರಿರಲಿಲ್ಲ ಎಂದು ಡೆಲ್ಲಿ ಫ್ರಾಂಚೈಸಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.