ADVERTISEMENT

ಡೈನೊಸಾರ್ ವಿಡಿಯೊ ಮಾಡಲು ಕೊಹ್ಲಿಗೆ ವಾರ್ನರ್ ಆಹ್ವಾನ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 21:33 IST
Last Updated 12 ಜೂನ್ 2020, 21:33 IST
ವಿರಾಟ್ ಕೊಹ್ಲಿ  –ಇನ್ಸ್ಟಾಗ್ರಾಮ್ ಚಿತ್ರ
ವಿರಾಟ್ ಕೊಹ್ಲಿ  –ಇನ್ಸ್ಟಾಗ್ರಾಮ್ ಚಿತ್ರ   

ಬೆಂಗಳೂರು: ಕೊರೊನಾ ವೈರಸ್ ಸೋಂಕು ತಡೆಗೆ ಲಾಕ್‌ಡೌನ್ ಆರಂಭವಾದಾಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಸಿಕ್ಕಾಪಟ್ಟೆ ಮಿಂಚುತ್ತಿದ್ದಾರೆ. ಇದೀಗ ಅವರು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯವರಿಗೆ ಡೈನೋಸಾರ್ ನಂತೆ ನಟಿಸಿರುವ ಟಿಕ್‌ ಟಾಕ್ ವಿಡಿಯೊ ಮಾಡುವಂತೆ ಆಹ್ವಾನಿಸಿದ್ದಾರೆ.

ಶುಕ್ರವಾರ ಇನ್ಸ್ಟಾಗ್ರಾಮ್‌ನಲ್ಲಿ ತಾವು ಹಾಗೂ ವಿರಾಟ್ ಇರುವ ಒಂದು ಹಳೆಯ ಚಿತ್ರವನ್ನು ಪೋಸ್ಟ್ ಮಾಡಿರುವ ವಾರ್ನರ್, ಅಭಿಮಾನಿಯೊಬ್ಬರು ಹಾಕಿರುವ ಕಾಮೆಂಟ್‌ಗೆ ಉತ್ತರಿಸುವಾಗ ಈ ಆಹ್ವಾನವನ್ನೂ ನೀಡಿದ್ದಾರೆ.

ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಖಾತೆ ಹೊಂದಿದ್ದಾರೆ. ಆದರೆ ಅವರನ್ನು ಟಿಕ್‌ಟಾಕ್‌ ತಾಣಕ್ಕೆ ಎಳೆದು ತರಲು ಹಲವು ದಿನಗಳಿಂದ ವಾರ್ನರ್ ಪ್ರಯತ್ನಿಸುತ್ತಿದ್ದಾರೆ.

ತಮ್ಮ ಕುಟುಂಬದೊಂದಿಗೆ ನೃತ್ಯ,ಅಡುಗೆ, ಹಾಡು, ಬಾಲಿವುಡ್ ಡ್ಯಾನ್ಸ್‌ಗಳ ವಿಡಿಯೊಗಳನ್ನು ವಾರ್ನರ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಈಚೆಗೆ ಅವರು ಭಾರತದ ಬಾಹುಬಲಿ ಚಿತ್ರದ ನಾಯಕನ ಕಾಸ್ಟೂಮ್ ಧರಿಸಿದ ಚಿತ್ರವನ್ನು ವಾರ್ನರ್ ಹಾಕಿದ್ದರು. ಅಗಿನಿಂದ ಅಭಿಮಾನಿಗಳು ಅವರನ್ನು ‘ಆಸ್ಟ್ರೇಲಿಯನ್ ಬಾಹುಬಲಿ’ ಎಂದು ಕರೆಯುತ್ತಿದ್ದಾರೆ.

ವಿರಾಟ್ ಕೂಡ ಟ್ವಿಟರ್, ಇನ್ಸ್ಟಾಗ್ರಾಮ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಚೆಗೆ ಅವರು ಡೈನೋಸಾರ್ ಮಾದರಿಯಲ್ಲಿ ಹೆಜ್ಜೆ ಹಾಕುತ್ತ ಓಡಾಡಿದ ವಿಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.

ಲಾಕ್‌ಡೌನ್ ಅವಧಿಯಲ್ಲಿ ಇನ್ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ ವಿಶ್ವದ ಅಗ್ರ ಹತ್ತು ಕ್ರೀಡಾಪಟುಗಳಲ್ಲಿ ವಿರಾಟ್ ಆರನೇ ಸ್ಥಾನ ಪಡೆದಿದ್ದರು. ಕೇವಲ ಎರಡು ತಿಂಗಳ ಅವಧಿಯಲ್ಲಿ ಅವರು ಮೂರುವರೆ ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಫುಟ್‌ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.