ADVERTISEMENT

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್: ಭಾರತ ತಂಡದ ಮುಂದೆ ದೊಡ್ಡ ಸವಾಲು

ಪಿಟಿಐ
Published 1 ಜೂನ್ 2023, 13:23 IST
Last Updated 1 ಜೂನ್ 2023, 13:23 IST
ಇಂಗ್ಲೆಂಡ್‌ನಲ್ಲಿ ಭಾರತ ತಂಡದ ಜಯದೇವ್ ಉನದ್ಕತ್, ಉಮೇಶ್ ಯಾದವ್, ಅಕ್ಷರ್ ಪಟೇಲ್ ಇದ್ದಾರೆ –ಬಿಸಿಸಿಐ ಟ್ವಿಟರ್ ಚಿತ್ರ
ಇಂಗ್ಲೆಂಡ್‌ನಲ್ಲಿ ಭಾರತ ತಂಡದ ಜಯದೇವ್ ಉನದ್ಕತ್, ಉಮೇಶ್ ಯಾದವ್, ಅಕ್ಷರ್ ಪಟೇಲ್ ಇದ್ದಾರೆ –ಬಿಸಿಸಿಐ ಟ್ವಿಟರ್ ಚಿತ್ರ   

ಪೋರ್ಟ್ಸ್‌ಮೌತ್: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಆಡಲು ಇಂಗ್ಲೆಂಡ್‌ಗೆ ಬಂದಿಳಿದಿರುವ ಭಾರತ ತಂಡದ ಬೌಲರ್‌ಗಳ ಮುಂದೆ ಮಹತ್ವದ ಸವಾಲು ಇದೆ.

ಕಳೆದ ಎರಡು ತಿಂಗಳು ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಿರುವ ಬೌಲರ್‌ಗಳು ಟೆಸ್ಟ್ ಮಾದರಿಗೆ ಹೊಂದಿಕೊಳ್ಳಬೇಕಿದೆ. ಅದರಲ್ಲೂ ಇಂಗ್ಲೆಂಡ್‌ ವಾತಾವರಣದಲ್ಲಿ ಡ್ಯೂಕ್ ಕೆಂಪು ಚೆಂಡಿನ ಬಳಕೆ ಮಾಡಲು ಸಿದ್ಧವಾಗಬೇಕಿದೆ. ಆದರೆ  ಈ ಸವಾಲಿಗೆ ಸಿದ್ಧರಾಗಿರುವುದಾಗಿ ಭಾರತ ತಂಡದ ಆಲ್‌ರೌಂಡರ್ ಅಕ್ಷರ್ ಪಟೇಲ್ ಹೇಳಿದ್ದಾರೆ.

’ಐಪಿಎಲ್‌ ಸಂದರ್ಭದಲ್ಲಿಯೂ ನಾವು ಡ್ಯೂಕ್ ಕೆಂಪು ಚೆಂಡಿನಲ್ಲಿ ಅಭ್ಯಾಸ ಮಾಡಿದ್ದೇವೆ. ಆದ್ದರಿಂದ ಇಲ್ಲಿ ಬೇಗ ಹೊಂದಿಕೊಳ್ಳುತ್ತೇವೆ‘ ಎಂದು ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಭಾರತದಲ್ಲಿ ನಡೆಯುವ ಟೆಸ್ಟ್‌ಗಳಲ್ಲಿ ಎಸ್‌.ಜಿ. ಚೆಂಡುಗಳನ್ನು ಬಳಸಲಾಗುತ್ತದೆ. ಇಂಗ್ಲೆಂಡ್‌ನಲ್ಲಿ ಮಾತ್ರ ಡ್ಯೂಕ್ ಚೆಂಡುಗಳಲ್ಲಿ ಆಡಿಸಲಾಗುತ್ತದೆ.

’ಈ ವಿಷಯ ನಮಗೆ ಮೊದಲೇ ತಿಳಿದಿತ್ತು. ಆದ್ದರಿಂದ ಐಪಿಎಲ್‌ ನಡುವೆಯೂ ಡಬ್ಲ್ಯುಟಿಸಿ ಅಭ್ಯಾಸಕ್ಕೆ ಆದ್ಯತೆ ಕೊಟ್ಟಿದ್ದೇವೆ. ಇದರಿಂದಾಗಿ ಆತ್ಮವಿಶ್ವಾಸ ವೃದ್ಧಿಸಿದೆ. ಕೆಂಪು ಚೆಂಡಿನ ಪ್ರಯೋಗವು ತುಸು ಕ್ಲಿಷ್ಟವಾದದ್ದು. ಆದರೆ ಅಭ್ಯಾಸಕ್ಕೆ ಬಹಳಷ್ಟು ಸಮಯವಿದ್ದ ಕಾರಣ ತೊಂದರೆಯಾಗಿಲ್ಲ‘ ಎಂದು ಅಕ್ಷರ್ ಐಸಿಸಿ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದರು.

’ಐಪಿಎಲ್‌ನಲ್ಲಿ ಪ್ಲೇ ಆಫ್‌ ಹಂತಕ್ಕೆ ಅರ್ಹತೆ ಪಡೆಯದ ತಂಡಗಳಲ್ಲಿದ್ದ ಆಟಗಾರರಿಗೆ ಟೆಸ್ಟ್‌ ಫೈನಲ್‌ಗೆ ಅಭ್ಯಾಸ ಮಾಡಲು ಹೆಚ್ಚು ಸಮಯ ಲಭಿಸಿತು. ಈ ವೇಳೆಯನ್ನು ಸದುಪಯೋಗ ಮಾಡಿಕೊಂಡಿದ್ದೇವೆ‘ ಎಂದೂ ಅಕ್ಷರ್ ಹೇಳಿದರು.

’ಹವಾಗುಣವೂ ಮಹತ್ವದ್ದಾಗಿದೆ. ಐಪಿಎಲ್ ಆಡುವಾಗ ಭಾರತದಲ್ಲಿ 40–45 ಡಿಗ್ರಿ ತಾಪಮಾನ ಇತ್ತು. ಆದರೆ ಇಲ್ಲಿ ಕಡಿಮೆ ಉಷ್ಣಾಂಶ ಇದೆ. ಆದ್ದರಿಂದ ನಮಗೆ ಹೊಂದಿಕೊಳ್ಳಲು ಕಷ್ಟವೇ ಅಗಲಿಲ್ಲ‘ ಎಂದರು.

ಜೂನ್ 7ರಿಂದ 11ರವರೆಗೆ ಡಬ್ಲ್ಯುಟಿಸಿ ಫೈನಲ್ ಪಂದ್ಯವು ದ ಓವಲ್‌ನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.