ADVERTISEMENT

ಧೋನಿ ಬೆಂಬಲಕ್ಕೆ ನಿಂತ ಸ್ಮೃತಿ ಇರಾನಿ

ಪಿಟಿಐ
Published 9 ಜೂನ್ 2019, 7:30 IST
Last Updated 9 ಜೂನ್ 2019, 7:30 IST
ಎಂ.ಎಸ್.ಧೋನಿ ಮತ್ತು ಸ್ಮೃತಿ ಇರಾನಿ.
ಎಂ.ಎಸ್.ಧೋನಿ ಮತ್ತು ಸ್ಮೃತಿ ಇರಾನಿ.   

ನವದೆಹಲಿ: ಗ್ಲೌಸ್‌ಗಳ ಮೇಲೆ ಬಲಿದಾನದ ಸಂಕೇತ ಪ್ರದರ್ಶಿಸಿದ ಕಾರಣಕ್ಕೆ ಐಸಿಸಿ ಕೆಂಗಣ್ಣಿಗೆ ಗುರಿಯಾಗಿರುವ ಕ್ರಿಕೆಟಿಗ ಎಂ.ಎಸ್‌.ಧೋನಿ ಪರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಜನಪ್ರಿಯ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

‘ನಾವು ಅಸ್ತಿತ್ವದಲ್ಲಿ ಇರಲಿಲ್ಲ ಅಂದ್ರೆ ನಿಮಗೆ ನಮ್ಮನ್ನು ನೋಡಲು, ನಮ್ಮ ಬಗ್ಗೆ ಕೇಳಲು ಆಗುತ್ತಲೇ ಇರಲಿಲ್ಲ. ವ್ಯಕ್ತಿಗತ ವಿಚಾರಗಳನ್ನು ಬಿಟ್ಹಾಕಿ. ಎಲ್ಲರೂ ಸಾರ್ವಭೌಮರೇ’ ಎನ್ನುವುದು ಸ್ಮೃತಿ ಪೋಸ್ಟ್‌ನ ಕನ್ನಡ ಭಾವಾನುವಾದ.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಈಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ಸೆಣೆಸಿತ್ತು. ಸೇನೆಯ ಪ್ಯಾರಾಶೂಟ್ ರೆಜಿಮೆಂಟ್‌ನ ಲೆಫ್ಟಿನೆಂಟ್‌ ಕರ್ನಲ್ ಆಗಿರುವ ಎಂ.ಎಸ್.ಧೋನಿ ಬಲಿದಾನ ಚಿಹ್ನೆಯನ್ನು ತಮ್ಮ ಗ್ಲೌಸ್‌ಗಳ ಮೇಲೆ ಧರಿಸಿದ್ದರು. ಇದಕ್ಕೆ ಐಸಿಸಿ ಆಕ್ಷೇಪಿಸಿ, ‘ಧೋನಿ ಆ ಬ್ಯಾಡ್ಜ್ ತೆಗೆಯುವುದು ಒಳಿತು’ ಎಂದು ಬಿಸಿಸಿಐಗೆ ಸೂಚಿಸಿತ್ತು.

ADVERTISEMENT

ಧೋನಿ ಅವರು ತಮ್ಮ ಗ್ಲೌಸ್‌ ಮೇಲೆ ಪ್ರದರ್ಶಿಸಿದ ಚಿಹ್ನೆಗಳಿಗೆ ಐಸಿಸಿ ಸಮ್ಮತಿ ಇರಲಿಲ್ಲ ಎಂದು ನಂತರದ ಹೇಳಿಕೆಯೊಂದರಲ್ಲಿ ಸ್ಪಷ್ಟವಾಗಿ ಹೇಳಿತ್ತು.

ಕೇಂದ್ರ ಸರ್ಕಾರ ಧೋನಿ ನಡೆಗೆ ಬೆಂಬಲ ಸೂಚಿಸಿತ್ತು. ಸಚಿವ ಕಿರಣ್ ರಿಜು ಮತ್ತು ಬಿಜೆಪಿ ಸಂಸದ ಮತ್ತು ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಧೋನಿ ನಡೆಯನ್ನು ಶ್ಲಾಘಿಸಿದ್ದರು. ವಿವಾದದಿಂದ ಸೇನೆ ದೂರ ಉಳಿದಿದೆ.

‘ವಿಕೆಟ್ ಕೀಪಿಂಗ್ ಗ್ಲೌಸ್‌ಗಳ ಮೇಲೆ ಬಲಿದಾನದ ಚಿಹ್ನೆ ಧರಿಸುವುದು ಧೋನಿ ಅವರ ವೈಯಕ್ತಿಕ ನಿರ್ಧಾರ. ಸೇನೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ’ ಎಂದು ಲೆಫ್ಟಿನೆಂಟ್ ಜನರಲ್ ಚೆರಿಶ್ ಮೆಟ್ಸನ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.