ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಅಭಿಷೇಕ್ ಶರ್ಮಾ ಅವರ ಅಬ್ಬರದ ಶತಕದ ಬಲದಿಂದ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಪಂದ್ಯದಲ್ಲಿ ಬೃಹತ್ ಮೊತ್ತ ಗಳಿಸಿತ್ತು. ದೊಡ್ಡ ಅಂತರ ಜಯ ಕೂಡ ಗಳಿಸಿತ್ತು.
ಸರಣಿಯಲ್ಲಿ 4–1ರಿಂದ ಗೆದ್ದ ತಂಡದ ಸಾಧನೆಯಿಂದ ಅಪಾರ ಸಂತಸಗೊಂಡಿರುವ ಮುಖ್ಯ ಕೋಚ್ ಗೌತಮ್ ಗಂಭೀರ್, ‘ದೊಡ್ಡ ಆಪಾಯವನ್ನು ಮೈಮೇಲೆ ಎಳೆದುಕೊಂಡು ಬೃಹತ್ ಪ್ರತಿಫಲ’ ಗಳಿಸುವುದು ನಮ್ಮ ಧ್ಯೇಯವಾಗಿದೆ’ ಎಂದಿದ್ದಾರೆ.
ಪಂದ್ಯದ ನಂತರ ಅಧಿಕೃತ ಪ್ರಸಾರಕ ವಾಹಿನಿಯೊಂದಿಗೆ ಮಾತನಾಡಿದ ಅವರು, ‘ಟಿ20 ಕ್ರಿಕೆಟ್ ಪಂದ್ಯಗಳಲ್ಲಿ 250–260 ರನ್‌ಗಳ ಮೊತ್ತ ಗಳಿಸುವುದೇ ನಮ್ಮ ಭವಿಷ್ಯದ ಗುರಿಯಾಗಿದೆ. ಇಂತಹ ಪ್ರಯತ್ನದಲ್ಲಿ ತಂಡವು ಕೆಲವೊಮ್ಮೆ 120–130 ರನ್‌ಗಳಿಗೇ ಆಲೌಟ್ ಆಗುವ ಅಪಾಯವೂ ಇದೆ.ಅದಕ್ಕೆ ನಾವು ಹೆದರುವುದಿಲ್ಲ’ ಎಂದೂ ಹೇಳಿದ್ದಾರೆ.
‘ನಾವು ಇದೇ ರೀತಿಯ ಟಿ20 ಕ್ರಿಕೆಟ್ ಆಡಲು ಇಚ್ಛಿಸುತ್ತೇವೆ. ಪಂದ್ಯ ಸೋಲುವ ಆತಂಕ ನಮಗಿಲ್ಲ. ದೊಡ್ಡ ಪ್ರತಿಫಲದ ಮೇಲೆ ನಮ್ಮ ಕಣ್ಣಿದೆ. ಈ ಸಿದ್ಧಾಂತವನ್ನು ತಂಡದ ಆಟಗಾರರು ಚೆನ್ನಾಗಿ ಅರಿತಿದ್ದಾರೆ. ಅದೇ ರೀತಿ ಆಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ನಿರ್ಭೀತ ಮನೋಭಾವದಿಂದ ಟಿ20 ಕ್ರಿಕೆಟ್ ಆಡದೇ ಹೋದರೆ ದೊಡ್ಡ ಸಾಧನೆ ಮಾಡಲು ಸಾಧ್ಯವಾಗದು. ನಾವು ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದೇವೆ ಎಂಬ ವಿಶ್ವಾಸ ನನಗಿದೆ. ಸೋಲುವುದಕ್ಕೆ ಹೆದರುವುದಿಲ್ಲ. ಇದೇ ಧೋರಣೆಯಿಂದ ಆಡುತ್ತೇವೆ’ ಎಂದರು.
‘ಸ್ವಾರ್ಥರಹಿತ ಮತ್ತು ನಿರ್ಭೀತ ಧೋರಣೆಯೇ ಟಿ20 ತಂಡಗಳ ಸಿದ್ಧಾಂತವಾಗಿದೆ. ಕಳೆದ ಆರು ತಿಂಗಳಲ್ಲಿ ನಮ್ಮ ಆಟಗಾರರು ಇದೇ ಸಿದ್ಧಾಂತದೊದಿಗೆ ಆಡಿದ್ದಾರೆ ಎಂದು ನನಗನಿಸುತ್ತದೆ’ ಎಂದರು.
ಈ ಪಂದ್ಯದಲ್ಲಿ 54 ಎಸೆತಗಳಲ್ಲಿ 135 ರನ್ ಸೂರೆ ಮಾಡಿದ ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್ ಅನ್ನು ಕೊಂಡಾಡಿದರು.
‘ಇಂತಹ ಆಟಗಾರರ ಬಗ್ಗೆ ನಾವು ಸಹನೆಯಿಂದ ಇರಬೇಕು. ಅವರು ಕೆಲವು ಸಲ ವಿಫಲರಾದಾಗಲೂ ಅವಕಾಶ ಕೊಟ್ಟು ಬೆಂಬಲಿಸಬೇಕು. ಅದರಿಂದ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. 140 ರಿಂದ 150 ಕಿ.ಮೀ ವೇಗದ ಎಸೆತಗಳನ್ನು ನಿರಂತರವಾಗಿ ಪ್ರಯೋಗಿಸುತ್ತಿದ್ದ ಬೌಲರ್‌ಗಳ ಮುಂದೆ ಇಂತಹ ಶತಕ ಹೊಡೆದಿದ್ದನ್ನು ನಾನು ಇದುವರೆಗೂ ನೋಡಿರಲಿಲ್ಲ’ ಎಂದು ಗಂಭೀರ್ ಪುಳಕಿತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.