ADVERTISEMENT

ಕ್ರಿಕೆಟ್‌ಗೆ ಮರ್ಲಾನ್‌ ಸ್ಯಾಮ್ಯುಯೆಲ್ಸ್ ವಿದಾಯ

ಪಿಟಿಐ
Published 4 ನವೆಂಬರ್ 2020, 13:40 IST
Last Updated 4 ನವೆಂಬರ್ 2020, 13:40 IST
ಮರ್ಲಾನ್‌ ಸ್ಯಾಮ್ಯುಯೆಲ್ಸ್
ಮರ್ಲಾನ್‌ ಸ್ಯಾಮ್ಯುಯೆಲ್ಸ್   

ಕಿಂಗ್‌ಸ್ಟನ್‌: ವೆಸ್ಟ್‌ ಇಂಡೀಸ್‌ ತಂಡವು ಗೆದ್ದುಕೊಂಡ ಎರಡು ಟ್ವೆಂಟಿ–20 ವಿಶ್ವಕಪ್‌ನ ಫೈನಲ್‌ ಪಂದ್ಯಗಳಲ್ಲಿ ಗರಿಷ್ಠ ರನ್‌ ಗಳಿಸಿದ ಖ್ಯಾತಿಯ ಮರ್ಲಾನ್‌ ಸ್ಯಾಮ್ಯುಯೆಲ್ಸ್ ಅವರು ಎಲ್ಲ ಮಾದರಿಯ ಕ್ರಿಕೆಟ್‌ ವಿದಾಯ ಹೇಳಿದ್ದಾರೆ.

ಸ್ಯಾಮ್ಯುಯೆಲ್ಸ್ ಅವರು ತಾವು ವಿದಾಯ ಹೇಳುತ್ತಿರುವುದಾಗಿ ಈ ವರ್ಷದ ಜೂನ್‌ನಲ್ಲೇ ತಮಗೆ ತಿಳಿಸಿದ್ದರು ಎಂದು ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ನ (ಸಿಡಬ್ಲ್ಯುಐ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾನಿ ಗ್ರೇವ್‌ ಹೇಳಿದ್ದಾರೆ. ಈ ವಿಷಯವನ್ನು ಇಎಸ್‌ಪಿಎನ್‌ಕ್ರಿಕ್‌ಇನ್ಫೊ ವರದಿ ಮಾಡಿದೆ.

39 ವರ್ಷದ ಕೆರಿಬಿಯನ್‌ ಆಟಗಾರ, ತಂಡದ ಪರ 71 ಟೆಸ್ಟ್‌, 207 ಏಕದಿನ ಹಾಗೂ 67 ಟ್ವೆಂಟಿ–20 ಪಂದ್ಯಗಳಲ್ಲಿ ಆಡಿದ್ದಾರೆ. 2018ರ ಡಿಸೆಂಬರ್‌ನಲ್ಲಿ ಅವರು ಕೊನೆಯ ಬಾರಿ ಕಣಕ್ಕಿಳಿದಿದ್ದರು.

ADVERTISEMENT

ಕೊಲಂಬೊದಲ್ಲಿ2012ರಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ನಡೆದ ಟಿ–20 ವಿಶ್ವಕಪ್‌ನ ಫೈನಲ್‌ ಹಣಾಹಣಿಯಲ್ಲಿ ಸ್ಯಾಮ್ಯುಯೆಲ್ಸ್ 56 ಎಸೆತಗಳಲ್ಲಿ 78 ರನ್ ಗಳಿಸಿದ್ದರು. ವಿಂಡೀಸ್‌ ಮೊದಲ ಬಾರಿ ಟ್ರೋಫಿ ಗೆದ್ದಿತ್ತು.

2016ರಲ್ಲಿ ಕೋಲ್ಕತ್ತದಲ್ಲಿ ನಡೆದ ಟಿ20 ವಿಶ್ವಕಪ್‌ ಫೈನಲ್‌ ಹಣಾಹಣಿಯಲ್ಲಿ 66 ಎಸೆತಗಳಲ್ಲಿ 85 ರನ್‌ ಕಲೆಹಾಕಿದ್ದ ಸ್ಯಾಮ್ಯುಯೆಲ್ಸ್, ತಮ್ಮ ತಂಡ ಇಂಗ್ಲೆಂಡ್‌ಅನ್ನು ಮಣಿಸಲು ನೆರವಾಗಿದ್ದರು.

ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಹಾಗೂ ಪುಣೆ ವಾರಿಯರ್ಸ್ ತಂಡಗಳ ಪರ ಅವರು ಆಡಿದ್ದರು.

2008ರಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ಎರಡು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದು ಅವರ ವೃತ್ತಿಜೀವನದ ಕಪ್ಪುಚುಕ್ಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.