ADVERTISEMENT

ಇಂದಿನಿಂದ 2ನೇ ಟೆಸ್ಟ್ | ಸರಣಿ ವಶದತ್ತ ವಿಂಡೀಸ್‌ ಚಿತ್ತ; ಇಂಗ್ಲೆಂಡ್‌ಗೆ ರೂಟ್ ಬಲ

ಏಜೆನ್ಸೀಸ್
Published 15 ಜುಲೈ 2020, 20:40 IST
Last Updated 15 ಜುಲೈ 2020, 20:40 IST
ಇಂಗ್ಲೆಂಡ್ ತಂಡದ ಬೆನ್‌ ಸ್ಟೋಕ್ಸ್ (ಬಲ) ಹಾಗೂ ರೂಟ್‌ –ಎಎಫ್‌ಪಿ ಚಿತ್ರ
ಇಂಗ್ಲೆಂಡ್ ತಂಡದ ಬೆನ್‌ ಸ್ಟೋಕ್ಸ್ (ಬಲ) ಹಾಗೂ ರೂಟ್‌ –ಎಎಫ್‌ಪಿ ಚಿತ್ರ   

ಲಂಡನ್: ಸೌತಾಂಪ್ಟನ್‌ನಲ್ಲಿ ನಡೆದಕೋವಿಡ್ ಕಾಲದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯರನ್ನು ಮಣಿಸಿದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಮ್ಯಾಂಚೆಸ್ಟರ್‌ನತ್ತ ದೃಷ್ಟಿ ನೆಟ್ಟಿದೆ.

ಓಲ್ಡ್ ಟ್ರಾಫರ್ಡ್‌ನಲ್ಲಿ ಗುರು ವಾರ ಆರಂಭವಾಗಲಿರುವ ಎರಡನೇ ಪಂದ್ಯದಲ್ಲಿ ಜಯಿಸಿ ಮೂರು ಪಂದ್ಯಗಳ ಸರಣಿಯನ್ನು ಕೈವಶ ಮಾಡಿಕೊಳ್ಳುವತ್ತ ಜೇಸನ್ ಹೋಲ್ಡರ್ ಬಳಗ ಚಿತ್ತ ನೆಟ್ಟಿದೆ.

ಆತಿಥೇಯ ಇಂಗ್ಲೆಂಡ್ ತಂಡಕ್ಕೆ ನಾಯಕ ಜೋ ರೂಟ್ ಮರಳಿದ್ದಾರೆ. ಎರಡನೇ ಮಗುವಿಗೆ ಜನ್ಮ ನೀಡಿದ್ದ ತಮ್ಮ ಪತ್ನಿಯೊಂದಿಗೆ ಇದ್ದ ಕಾರಣ ಜೋ ರೂಟ್ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಬೆನ್‌ ಸ್ಟೋಕ್ಸ್‌ ನಾಯಕತ್ವ ವಹಿಸಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ನಾಲ್ಕು ವಿಕೆಟ್‌ಗಳಿಂದ ಸೋತಿತ್ತು. ಕೇವಲ 200 ರನ್‌ಗಳ ಗುರಿ ಬೆನ್ನತ್ತಿದ್ದ ವಿಂಡೀಸ್‌ ಆರಂಭದಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಜರ್ಮೈನ್ ಬ್ಲ್ಯಾಕ್‌ವುಡ್ ಅಮೋಘ ಬ್ಯಾಟಿಂಗ್ ಮೂಲಕ ತಂಡಕ್ಕೆ ಜಯದ ಕಾಣಿಕೆ ನೀಡಿದ್ದರು. ಉಳಿದಿರುವ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದರೂ ತಂಡ 32 ವರ್ಷಗಳ ನಂತರ ಇಂಗ್ಲೆಂಡ್‌ನಲ್ಲಿ ಸರಣಿ ಗೆದ್ದ ಸಾಧನೆ ಮಾಡಲಿದೆ.

ADVERTISEMENT

ಈ ಪಂದ್ಯದಲ್ಲಿ ಜೋ ಡೆನ್ಲಿ ತಂಡದಿಂದ ಹೊರಗುಳಿಯಲಿದ್ದಾರೆ. ಜಾಕ್ ಕ್ರೌವ್ಲಿ 2ನೇ ಇನಿಂಗ್ಸ್‌ನಲ್ಲಿ 76 ರನ್ ಗಳಿಸಿರುವುದರಿಂದ ಅವರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇಲ್ಲ. ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್‌ ಹಾಗೂ ಮಾರ್ಕ್‌ ವುಡ್‌ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇವರ ಸ್ಥಾನದಲ್ಲಿ ಸ್ಟುವರ್ಟ್‌ ಬ್ರಾಡ್‌ ಮತ್ತು ಸ್ಯಾಮ್‌ ಕರನ್‌ ಅವರನ್ನು ಆಡಿಸುವ ಸಾಧ್ಯತೆಯಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ).
ನೇರಪ್ರಸಾರ: ಸೋನಿ ಸಿಕ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.