ADVERTISEMENT

PV Web Exclusive | ಐಪಿಎಲ್ ದಾಖಲೆಗಳಲ್ಲಿ ವೆಸ್ಟ್ ಇಂಡೀಸ್‌ ಶಕ್ತಿ

ವಿಕ್ರಂ ಕಾಂತಿಕೆರೆ
Published 18 ಅಕ್ಟೋಬರ್ 2020, 6:38 IST
Last Updated 18 ಅಕ್ಟೋಬರ್ 2020, 6:38 IST
ಕ್ರಿಸ್ ಗೇಲ್ –ಪಿಟಿಐ ಚಿತ್ರ
ಕ್ರಿಸ್ ಗೇಲ್ –ಪಿಟಿಐ ಚಿತ್ರ   

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಇತಿಹಾಸದಲ್ಲಿ ವೆಸ್ಟ್ ಇಂಡೀಸ್ ಆಟಗಾರರು ಪಾರಮ್ಯ ಮೆರೆಯುತ್ತಾ ಬಂದಿದ್ದಾರೆ. ಈ ಚುಟುಕು ಕ್ರಿಕೆಟ್‌ ಲೀಗ್‌ನ ಉದ್ದಕ್ಕೂ ಕೆರೀಬಿಯನ್ನರ ಸಾಮರ್ಥ್ಯಕ್ಕೆ ನಿದರ್ಶನಗಳು ಸಿಗುತ್ತವೆ. ಬ್ಯಾಟಿಂಗ್, ಬೌಲಿಂಗ್‌ ಮತ್ತು ಆಲ್‌ರೌಂಡ್ ಆಟದಲ್ಲಿ ಮಿಂಚಿರುವ ಆ ದೇಶದ ಆಟಗಾರರು ಫೀಲ್ಡಿಂಗ್‌ನಲ್ಲೂ ಚಾಣಾಕ್ಷತನ ತೋರಿದ್ದಾರೆ. ಐಪಿಎಲ್‌ನಲ್ಲಿ ಈ ವರೆಗಿನ ದಾಖಲೆಗಳ ಮೇಲೆ ಕಣ್ಣಾಡಿಸಿದರೆ, ಅಲ್ಲಿನವರು ಭಾರತದ ಆಟಗಾರರಿಗಿಂತ ಹೆಚ್ಚು ಪ್ರಭಾವ ಬೀರಿದ್ದು ಸ್ಪಷ್ಟವಾಗುತ್ತದೆ. 126 ಪಂದ್ಯಗಳನ್ನು ಆಡಿರುವ ಕ್ರಿಸ್ ಗೇಲ್ ಅವರಿಂದ ಶುರುವಾಗುವ ಈ ಯಶೋಗಾಥೆ ಕೇವಲ 15 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ನಿಕೋಲಸ್ ಪೂರನ್ ವರೆಗೂ ಮುಂದುವರಿಯುತ್ತದೆ.

ಸಿಕ್ಸರ್‌ಗಳ ಸರದಾರ ಕ್ರಿಸ್ ಗೇಲ್

ಐಪಿಎಲ್‌ನ ಬ್ಯಾಟಿಂಗ್‌ ವಿಭಾಗಕ್ಕೆ ಸಂಬಂಧಿಸಿದ ವಿವಿಧ ದಾಖಲೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಡಗೈ ಆಟಗಾರ, ‘ಯೂನಿವರ್ಸಲ್ ಬಾಸ್’ ಕ್ರಿಸ್ ಗೇಲ್. ಟೂರ್ನಿಯಲ್ಲಿ ಅತಿಹೆಚ್ಚು ಸಿಕ್ಸರ್‌, ಒಂದೇ ಇನಿಂಗ್ಸ್‌ನಲ್ಲಿ ಗರಿಷ್ಠ ಸಿಕ್ಸರ್‌, ಗರಿಷ್ಠ ವೈಯಕ್ತಿಕ ಮೊತ್ತ, ಅತಿಹೆಚ್ಚು ಶತಕ, ವೇಗದ ಶತಕ ಮುಂತಾದ ದಾಖಲೆಗಳ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. ಉಳಿದ ಕೆಲವು ದಾಖಲೆಗಳ ಪಟ್ಟಿಯಲ್ಲಿ ಅಗ್ರ 10ರೊಳಗೆ ಅಥವಾ 20ರೊಳಗೆ ಅವರ ಹೆಸರು ಇದೆ.

ADVERTISEMENT

ಅತಿಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕ್ರಿಸ್ ಗೇಲ್ (126 ಪಂದ್ಯ; 4537ರನ್‌) ಎಂಟನೇ ಸ್ಥಾನದಲ್ಲಿದ್ದಾರೆ. ಅಗ್ರ 25ರಲ್ಲಿ ಕೀರನ್ ಪೊಲಾರ್ಡ್ (156 ಪಂದ್ಯ; 2929 ರನ್) ಇದ್ದಾರೆ. 331 ಸಿಕ್ಸರ್ ಸಿಡಿಸಿರುವ ಗೇಲ್ ಅತಿ ಹೆಚ್ಚು ಸಿಕ್ಸರ್ ಹೊಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಕೀರನ್ ಪೊಲಾರ್ಡ್‌ 189 ಸಿಕ್ಸರ್‌ಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಆ್ಯಂಡ್ರೆ ರಸೆಲ್ ಮತ್ತು ಡ್ವೇಯ್ನ್‌ ಸ್ಮಿತ್ ಕ್ರಮವಾಗಿ 14 ಮತ್ತು 16ನೇ ಸ್ಥಾನದಲ್ಲಿದ್ದಾರೆ.

2013ರ ಆವೃತ್ತಿಯ ಒಂದೇ ಇನಿಂಗ್ಸ್‌ನಲ್ಲಿ 17 ಸಿಕ್ಸರ್ ಸಿಡಿಸಿದ ಗೇಲ್ ಈ ಪಟ್ಟಿಯಲ್ಲಿ ಇನ್ನೂ ಅಗ್ರಸ್ಥಾನದಲ್ಲೇ ಇದ್ದಾರೆ. ವಿಶೇಷವೆಂದರೆ, ಈ ಪಟ್ಟಿಯ ಅಗ್ರ 10ರಲ್ಲಿ ಗೇಲ್ ಹೆಸರು ನಾಲ್ಕು ಬಾರಿ ಕಾಣಿಸಿಕೊಳ್ಳುತ್ತದೆ. 13, 12 ಮತ್ತು 11 ಸಿಕ್ಸರ್‌ಗಳನ್ನೂ ಅವರು ಹೊಡೆದಿದ್ದಾರೆ. 10 ಸಿಕ್ಸರ್‌ಗಳೊಂದಿಗೆ ಕೀರನ್ ಪೊಲಾರ್ಡ್ 10ನೇ ಸ್ಥಾನದಲ್ಲಿದ್ದರೆ ಒಂಬತ್ತು ಸಿಕ್ಸರ್‌ಗಳೊಂದಿಗೆ ಆ್ಯಂಡ್ರೆ ರಸೆಲ್ 15ನೇ ಸ್ಥಾನದಲ್ಲಿದ್ದಾರೆ. ಇನಿಂಗ್ಸ್‌ನಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲೂ ಗೇಲ್‌ಗೇ ಮೊದಲ ಸ್ಥಾನ. ಅಜೇಯ 175 ರನ್ ಅವರ ಸಾಧನೆ.

ಗರಿಷ್ಠ ಸ್ಟ್ರೈಕ್ ರೇಟ್‌ನಲ್ಲೂ ವೆಸ್ಟ್ ಇಂಡೀಸ್ ಆಟಗಾರರದೇ ‍ಪಾರಮ್ಯ. ಈ ಪಟ್ಟಿಯ ಮೊದಲ ಮೂರು ಸ್ಥಾನಗಳಲ್ಲಿ ದ್ವೀಪರಾಷ್ಟ್ರದವರು ಇದ್ದಾರೆ. ಅಗ್ರಸ್ಥಾನದಲ್ಲಿರುವ ರಸೆಲ್ 183.08ರಸ್ಟ್ರೈಕ್ ರೇಟ್‌ ಹೊಂದಿದ್ದರೆ,169.29ರಸ್ಟ್ರೈಕ್ ರೇಟ್‌ನೊಂದಿಗೆ ನಿಕೋಲಸ್ ಪೂರನ್ ಎರಡನೇ ಸ್ಥಾನವನ್ನೂ163.65ರೊಂದಿಗೆ ಸುನಿಲ್ ನಾರಾಯಣ್ ಮೂರನೇ ಸ್ಥಾನವನ್ನೂ ಗಳಿಸಿದ್ದಾರೆ. ಕ್ರಿಸ್ ಗೇಲ್ ಮತ್ತು ಕೀರನ್ ಪೊಲಾರ್ಡ್ 25ರ ಪಟ್ಟಿಯಲ್ಲಿದ್ದಾರೆ. ಗರಿಷ್ಠ ಸರಾಸರಿಯ ಪಟ್ಟಿಯಲ್ಲಿ ಕ್ರಿಸ್ ಗೇಲ್ (41.24) ಎಂಟನೇ ಸ್ಥಾನದಲ್ಲಿದ್ದಾರೆ. ಅತಿಹೆಚ್ಚು ಅರ್ಧಶತಕ ಗಳಿಸಿದವರ ಪಟ್ಟಿಯಲ್ಲೂ ಕ್ರಿಸ್ ಗೇಲ್ (29) ಟಾಪ್‌ ಟೆನ್‌ (8ನೇ ಸ್ಥಾನ) ನಲ್ಲಿದ್ದಾರೆ. ಆರು ಶತಕಗಳೊಂದಿಗೆ ಅತಿಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲೂ ಕ್ರಿಸ್ ಗೇಲ್ ಅಗ್ರ ಸ್ಥಾನ ಅಲಂಕರಿಸಿದ್ದಾರೆ.

ವೇಗದ ಅರ್ಧಶತಕ ಗಳಿಸಿದವರ ಪಟ್ಟಿಯಲ್ಲಿ ಕ್ರಿಸ್ ಗೇಲ್ (17 ಎಸೆತ) ಐದನೇ ಸ್ಥಾನದಲ್ಲಿದ್ದರೆ ನಿಕೋಲಸ್ ಪೂರನ್ ಒಂಬತ್ತನೇ ಸ್ಥಾನದಲ್ಲಿದ್ದಾರೆ. ವೇಗದ ಶತಕ ಗಳಿಸಿದವರ ಪಟ್ಟಿಯಲ್ಲಿ ಗೇಲ್‌ಗೆ (30 ಎಸೆತ) ಮೊದಲ ಸ್ಥಾನ. 10 ಮತ್ತು 11ನೇ ಸ್ಥಾನದಲ್ಲೂ ಅವರು ಕಾಣಿಸಿಕೊಂಡಿದ್ದಾರೆ.

ಬೌಲಿಂಗ್‌ನಲ್ಲಿ ಸುನಿಲ್ ನಾರಾಯಣ್ ಪಾರಮ್ಯ

ಬೌಲಿಂಗ್ ವಿಭಾಗದಲ್ಲೂ ವೆಸ್ಟ್ ಇಂಡೀಸ್ ಆಟಗಾರರು ಪಾರಮ್ಯ ಸಾಧಿಸಿದ್ದಾರೆ. ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಡ್ವೇನ್ ಬ್ರಾವೊ (139 ಪಂದ್ಯ; 152 ವಿಕೆಟ್) ನಾಲ್ಕನೇ ಸ್ಥಾನದಲ್ಲೂ ಸುನಿಲ್ ನಾರಾಯಣ್ (116 ಪಂದ್ಯ; 127 ವಿಕೆಟ್) ಎಂಟನೇ ಸ್ಥಾನದಲ್ಲೂ ಇದ್ದಾರೆ. ಉತ್ತಮ ಇಕಾನಮಿ ರೇಟ್‌ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವಸುನಿಲ್ ನಾರಾಯಣ್(6.74) ಇನಿಂಗ್ಸ್‌ನಲ್ಲಿ ಹೆಚ್ಚು ಹ್ಯಾಟ್ರಿಕ್ (13 ಮಂದಿ, ತಲಾ ಒಂದೊಂದು) ಗಳಿಸಿದವರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಅತಿ ಹೆಚ್ಚು ಡಾಟ್ ಬಾಲ್ (1,092) ಹಾಕಿದವರ ಪಟ್ಟಿಯಲ್ಲಿ ಅವರಿಗೆ ಏಳನೇ ಸ್ಥಾನ. ಹೆಚ್ಚು ಬಾರಿ ನಾಲ್ಕು ವಿಕೆಟ್ ಕಬಳಿಸಿದವರ ಪಟ್ಟಿಯಲ್ಲಿ ಅವರಿಗೆ ಅಗ್ರಸ್ಥಾನವಿದೆ. ಆರು ಬಾರಿ ಅವರು ಈ ಸಾಧನೆ ಮಾಡಿದ್ದಾರೆ.

ಅಲ್ಜರಿ ಜೋಸೆಫ್, ಇನಿಂಗ್ಸ್ ಒಂದರಲ್ಲಿ ಉತ್ತಮ ಬೌಲಿಂಗ್ ಮಾಡಿದವರ ಪಟ್ಟಿಯ ಮೊದಲ ಸ್ಥಾನದಲ್ಲಿದ್ದಾರೆ.3.4 ಓವರ್‌ಗಳಲ್ಲಿ 12 ನೀಡಿ ಅವರು ಆರು ವಿಕೆಟ್ ಉರುಳಿಸಿದ್ದರು.

ದಾಖಲೆಗಳ ಪಟ್ಟಿಯಲ್ಲಿ ಇಲ್ಲದಿದ್ದರೂ ತಾವು ಪ್ರತಿನಿಧಿಸುವ ತಂಡಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವೆಸ್ಟ್ ಇಂಡೀಸ್‌ನ ಅನೇಕ ಆಟಗಾರರು ಐಪಿಎಲ್‌ಗೆ ರೋಚಕತೆ, ಸೊಬಗು ತುಂಬಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಆಡುತ್ತಿರುವ ಶಿಮ್ರಾನ್ ಹೆಟ್ಮೆಯರ್, ಕೀಮೊ ಪಾಲ್, ಕಿಂಗ್ಸ್ ಇಲೆವನ್ ಪಂಜಾಬ್‌ನ ಶೆಲ್ಡನ್ ಕಾಟ್ರೆಲ್, ರಾಜಸ್ಥಾನ ರಾಯಲ್ಸ್‌ನ ಒಶೇನ್ ಥಾಮಸ್, ಸನ್‌ರೈಸರ್ಸ್‌ನ ಜೇಸನ್ ಹೋಲ್ಡರ್ ಮುಂತಾದವರು ಭರವಸೆಯ ಬೆಳಕಾಗಿ ಮೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.