
ಬೆಂಗಳೂರು: ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ವಿಭಿನ್ನವಾದ ರೋಚಕ ಲೋಕವೊಂದು ಅನಾವರಣಗೊಂಡಿತು. ನೋಡುಗರನ್ನು ಬೆರಗಾಗಿಸಿತು. ಅಲ್ಲಿ ನಡೆದಿದ್ದ ಕ್ರಿಕೆಟ್ ಪಂದ್ಯದಲ್ಲಿ ಓಡುವವರೇ ಇರಲಿಲ್ಲ. ಆದರೆ ತಮ್ಮ ಕಾಲುಗಳ ಶಕ್ತಿಯನ್ನು ಕಿತ್ತುಕೊಂಡು ಓಡದಂತೆ ಮಾಡಿದ ವಿಧಿಗೇ ಸಡ್ಡು ಹೊಡೆದವರ ದಂಡು ಅಲ್ಲಿತ್ತು.
ಹೌದು; ಗಾಲಿಕುರ್ಚಿಗಳ ಸಹಾಯದಿಂದ ಅವರೆಲ್ಲರೂ ಕ್ರಿಕೆಟ್ ಆಡಿದರು. ಉರುಳುಗಾಲಿ ಕುರ್ಚಿಯ ವೇಗ, ಚಲನೆಯನ್ನು ನಿಯಂತ್ರಿಸುವುದರ ಜೊತೆಗೆ ಗಾಳಿಯಲ್ಲಿ ತೇಲುವ ಚೆಂಡನ್ನು ಕ್ಯಾಚ್ ಮಾಡಿದರು. ಕ್ರೀಸ್‌ನಲ್ಲಿ ಶಿಸ್ತಿನಿಂದ ಬೌಲಿಂಗ್ ಮಾಡಿದರು. ಬ್ಯಾಟರ್‌ಗಳು ಸಿಕ್ಸರ್, ಬೌಂಡರಿ ಸಿಡಿಸಿದರು. ವಿಕೆಟ್ ಪಡೆದಾಗಲೆಲ್ಲ ಫೀಲ್ಡರ್‌ಗಳು ಸೇರಿ ಸಂಭ್ರಮಿಸಿದ ಪರಿಯೂ ಅನನ್ಯ. ತಮ್ಮ ವಿಶೇಷ ಸಾಮರ್ಥ್ಯದೊಂದಿಗೆ ಎಲ್ಲರ ಮನಗೆದ್ದರು.
ಟೆಕ್ ಸ್ಪೋರ್ಟ್ಸ್ ಎಬಿಲಿಟಿ ಟಿ20 ಲೀಗ್ ಕ್ರಿಕೆಟ್ ಟೂರ್ನಿಯ ಎರಡನೇ ಆವೃತ್ತಿಯ ಫೈನಲ್ ಪಂದ್ಯವದು. ಅದರಲ್ಲಿ ಬೆಂಗಳೂರು ಈಗಲ್ಸ್ ತಂಡವು 59 ರನ್‌ಗಳಿಂದ ಲಖನೌ ಸ್ಟಾಲಿಯನ್ಸ್ ವಿರುದ್ಧ ಜಯಭೇರಿ ಬಾರಿಸಿತು. ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
2024ರಲ್ಲಿ ಚೆನ್ನೈ ವಿರುದ್ಧ ಫೈನಲ್ ಪಂದ್ಯದಲ್ಲಿ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಬೆಂಗಳೂರು ಪಡೆ, ಈ ಬಾರಿ ಲೀಗ್‌ನಲ್ಲಿ ಸತತ ಗೆಲುವುಗಳ ನಂತರ ಫೈನಲ್ ತಲುಪಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬೆಂಗಳೂರು ಈಗಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 217 ರನ್ ಗಳಿಸಿತ್ತು. ಲಖನೌ ಸ್ಟಾಲಿಯನ್ಸ್ ಪಡೆಗೆ 20 ಓವರ್‌ಗಳಲ್ಲಿ ಕೇವಲ 159 ರನ್ ಗಳಿಸಲು ಸಾಧ್ಯವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.