ADVERTISEMENT

ಭಾರತ ತಂಡದಲ್ಲಿ ವರುಣ್‌ ಚಕ್ರವರ್ತಿ: ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವಕಾಶ?

ಪಿಟಿಐ
Published 4 ಫೆಬ್ರುವರಿ 2025, 14:04 IST
Last Updated 4 ಫೆಬ್ರುವರಿ 2025, 14:04 IST
   

ನಾಗ್ಪುರ: ಅಮೋಘ ಲಯದಲ್ಲಿರುವ ‘ನಿಗೂಢ ಸ್ಪಿನ್ನರ್’ ವರುಣ ಚಕ್ರವರ್ತಿ ಅವರು  ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡಲಿರುವ ಭಾರತ ತಂಡದೊಂದಿಗೆ ಮಂಗಳವಾರ ಅಭ್ಯಾಸ ನಡೆಸಿದರು.

ಈಚೆಗೆ ಮುಗಿದ ಟಿ20 ಸರಣಿಯಲ್ಲಿ ಭಾರತ ತಂಡವು 4–1ರಿಂದ ಜಯಿಸಿತು. ಅದರಲ್ಲಿ ಚಕ್ರವರ್ತಿ ಉತ್ತಮವಾಗಿ ಆಡಿದ್ದರು. ಐದು ಪಂದ್ಯಗಳಲ್ಲಿ ಒಟ್ಟು 14 ವಿಕೆಟ್‌ಗಳನ್ನು ಗಳಿಸಿದರು. ಸರಣಿಶ್ರೇಷ್ಠ ಗೌರವಕ್ಕೂ ಪಾತ್ರರಾದರು. 

ಇದೇ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ತಂಡದಲ್ಲಿಯೂ ಅವರು ಸ್ಥಾನ ಗಳಿಸುವ ಸಾಧ್ಯತೆ ಇದೆ.  ಇಲ್ಲಿ ನಡೆದ ತಂಡದಆಟಗಾರರೊಂದಿಗೆ ಚಕ್ರವರ್ತಿಯವರು ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ಮಾಡಿದರು. ಅವರು ತಮ್ಮ ಉತ್ತಮ ಲಯವನ್ನು ನಿರಂತರವಾಗಿ ಕಾಪಾಡಿಕೊಳ್ಳಬೇಕು. ಅದಕ್ಕಾಗಿ ನೆಟ್ಸ್‌ನಲ್ಲಿ ಅನುಭವಿಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಅವರಿಗೆ ಬೌಲಿಂಗ್ ಮಾಡಬೇಕು ಎಂದು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಯೋಜನೆ. 

ADVERTISEMENT

ಚಾಂಪಿಯನ್ಸ್ ಟ್ರೋಫಿಗೆ ತೆರಳುವ ತಂಡದಲ್ಲಿ ಬದಲಾವಣೆಗಳನ್ನು ಮಾಡಲು ಫೆಬ್ರುವರಿ 12 ಕೊನೆಯ ದಿನವಾಗಿದೆ. ಚಕ್ರವರ್ತಿಯವರು ಆ ತಂಡದಲ್ಲಿ ಸ್ಥಾನ ಪಡೆಯುವವರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ.

ಭಾರತ ತಂಡದಲ್ಲಿ ಸದ್ಯ ಮೂವರು ‘ಫಿಂಗರ್ ಸ್ಪಿನ್ನರ್ಸ್‌’ ಇದ್ದಾರೆ. ಅದರಲ್ಲಿ ರವೀಂದ್ರ ಜಡೇಜ ಮತ್ತು ಅಕ್ಷರ್ ಪಟೇಲ್ ಎಡಗೈ ಸ್ಪಿನ್ ಬೌಲರ್‌ಗಳಾಗಿದ್ದಾರೆ. ಬಲಗೈ ಆಫ್‌ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಹಾಗೂ ಚೈನಾಮನ್ ಕುಲದೀಪ್ ಯಾದವ್ಅ ವರು ತಂಡಕ್ಕೆ ಮರಳುತ್ತಿದ್ದಾರೆ. ಕುಲದೀಪ್ ಈಚೆಗೆ ಸ್ಪೋರ್ಟ್ಸ್ಹ ರ್ನಿಯಾ ಶಸ್ತ್ರಚಿಕಿತ್ಸೆಗೊಳಗಾಗಿ ಚೇತರಿಸಿಕೊಂಡಿದ್ದಾರೆ. ಈಗ ತಂಡದಲ್ಲಿರುವ ಏಕೈಕ ಮಣಿಕಟ್ಟಿನ ಸ್ಪಿನ್ನರ್ ಅವರಾಗಿದ್ದಾರೆ.

‘ಏಕದಿನ ಕ್ರಿಕೆಟ್ ಬಳಗದ ನೆಟ್ಸ್‌ನಲ್ಲಿ ವರುಣ ಅಭ್ಯಾಸ ಮಾಡಬೇಕೆಂದು ಭಾರತ ತಂಡದ ಮ್ಯಾನೇಜ್ ಮೆಂಟ್ ಸೂಚಿಸಿದೆ. ಅದರಿಂದಾಗಿ ವರುಣ ಅವರು ದೇಶಿ ಕ್ರಿಕೆಟ್‌ನಲ್ಲಿ ಆಡುವುದಿಲ್ಲ’ ಎಂದು ಬಿಸಿಸಿಐನ
ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ದೇಶಿ ಕ್ರಿಕೆಟ್‌ನಲ್ಲಿ ಸೀಮಿತ ಓವರ್‌ಗಳ ಟೂರ್ನಿಗಳು ಈಗಾಗಲೇ ಮುಕ್ತಾಯವಾಗಿವೆ. ಅದರಿಂದಾಗಿ ಮಾರ್ಚ್‌ನಲ್ಲಿ ಐಪಿಎಲ್ ಆರಂಭವಾಗುವವರೆಗೂ ಚಕ್ರವರ್ತಿಗೆ ಯಾವುದೇ ಟೂರ್ನಿ ಇಲ್ಲ. ಸದ್ಯ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅದೇ ರೀತಿ ಚೆನ್ನಾಗಿ ಬೌಲಿಂಗ್ ಮಾಡುವುದನ್ನು ಮುಂದುವರಿಸಲಿ ಎಂಬುದು ಬಿಸಿಸಿಐ ಉದ್ದೇಶವಾಗಿದೆ’ ಎಂದೂ ತಿಳಿಸಿದ್ದಾರೆ.

2021ರಲ್ಲಿ ದುಬೈನಲ್ಲಿ ಆಯೋಜನೆಯಾಗಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವರುಣ ಚಕ್ರವರ್ತಿ ಆಡಿದ್ದರು. ಆದರೆ ಅವರು ಆಗ ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ. ಆದರೆ ಅಲ್ಲಿಂದ ಇಲ್ಲಿಯವರೆಗೆ ಅವರು
ತಮ್ಮ ಕೌಶಲಗಳನ್ನು ಬಹಳಷ್ಟು ಸುಧಾರಿಸಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ತಂಡದ ಬಾಗಿಲು
ತೆರೆಯುವ ಸಾಧ್ಯತೆ ಇದೆ. ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಪ್ರಮುಖ ಬೌಲರ್ ಕೂಡ ಅವರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.