ADVERTISEMENT

ಮಹಿಳಾ ಕ್ರಿಕೆಟ್: ಭಾರಕ್ಕೆ ಸರಣಿ ಜಯ

ನೈಟ್‌, ವೈಟ್ ಆಟದ ಸೊಬಗು: ಬ್ರುಂಟ್‌ಗೆ 5 ವಿಕೆಟ್‌

ಪಿಟಿಐ
Published 28 ಫೆಬ್ರುವರಿ 2019, 20:15 IST
Last Updated 28 ಫೆಬ್ರುವರಿ 2019, 20:15 IST
ಮೂರನೇ ಪಂದ್ಯದಲ್ಲಿ ಸ್ಮೃತಿ ಮಂದಾನ ಅವರ ಆಟದ ಶೈಲಿ –ಪಿಟಿಐ ಚಿತ್ರ
ಮೂರನೇ ಪಂದ್ಯದಲ್ಲಿ ಸ್ಮೃತಿ ಮಂದಾನ ಅವರ ಆಟದ ಶೈಲಿ –ಪಿಟಿಐ ಚಿತ್ರ   

ಮುಂಬೈ: ಸೋಲಿನ ಪ್ರಪಾತದಿಂದ ಮೇಲೆದ್ದ ಇಂಗ್ಲೆಂಡ್ ತಂಡದವರು ಮಿಥಾಲಿ ರಾಜ್ ಬಳಗದ ಲೆಕ್ಕಾಚಾರ ಬುಡಮೇಲು ಮಾಡಿದರು. ನಾಯಕಿ ಹಿದರ್ ನೈಟ್ ಮತ್ತು ಡ್ಯಾನಿಯಲ್ ವೈಟ್ ಜೋಡಿಯ ಅಮೋಘ ಆಟದ ಬಲದಿಂದ ಇಂಗ್ಲೆಂಡ್‌ ತಂಡವು, ಇಲ್ಲಿ ಗುರುವಾರ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತವನ್ನು ಮಣಿಸಿತು. ಮೊದಲ ಎರಡು ಪಂದ್ಯಗಳನ್ನು ಗೆದ್ದ ಮಿಥಾಲಿ ರಾಜ್ ಬಳಗ ಸರಣಿಯನ್ನು ತನ್ನದಾಗಿಸಿಕೊಂಡಿತು.

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ (66; 74 ಎಸೆತ, 1 ಸಿಕ್ಸರ್, 8 ಬೌಂಡರಿ) ಮತ್ತು ಮೂರನೇ ಕ್ರಮಾಂಕದ ಪೂನಂ ರಾವತ್ (56; 97 ಎಸೆತ, 7 ಬೌಂ) ಅವರ 129 ರನ್‌ಗಳ ಜೊತೆಯಾಟದ ನೆರವಿನಿಂದ 205 ರನ್‌ ಕಲೆ ಹಾಕಿತು.

ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. 15ನೇ ಓವರ್‌ನಲ್ಲಿ ತಂಡ 49 ರನ್‌ ಗಳಿಸಿ ಐದು ವಿಕೆಟ್ ಕಳೆದುಕೊಂಡಿ‌ತ್ತು. ಈ ಸಂದರ್ಭದಲ್ಲಿ ಒಂದಾದ ನೈಟ್‌ (47; 63 ಎಸೆತ, 6 ಬೌಂ) ಮತ್ತು ವೈಟ್ (56; 82 ಎಸೆತ, 5 ಬೌಂ) 69 ರನ್‌ ಸೇರಿಸಿ ಜಯದ ಭರವಸೆ ಮೂಡಿಸಿದರು.

ADVERTISEMENT

ಜಾರ್ಜಿಯಾ ಎಲ್ವಿಸ್‌ ಅಜೇಯ 33 ರನ್ ಗಳಿಸಿ ತಂಡಕ್ಕೆ ಜಯ ಗಳಿಸಿಕೊಟ್ಟರು. ಮಹಿಳೆಯರ ಐಸಿಸಿ ಚಾಂಪಿಯನ್‌ಷಿಪ್‌ನ ಭಾಗವಾಗಿ ನಡೆದ ಸರಣಿಯ ಈ ಗೆಲುವು ಪ್ರವಾಸಿ ತಂಡಕ್ಕೆ ಮಹತ್ವದ ಎರಡು ಪಾಯಿಂಟ್‌ಗಳನ್ನು ಗಳಿಸಿಕೊಟ್ಟಿತು. ಮಧ್ಯಮವೇಗಿ ಜೂಲನ್ ಗೋಸ್ವಾಮಿ ಆರಂಭದಲ್ಲೇ ಇಂಗ್ಲೆಂಡ್‌ಗೆ ‍ಪೆಟ್ಟು ನೀಡಿದರು. ಮೊದಲ ಮೂರು ವಿಕೆಟ್‌ಗಳನ್ನು ಅವರು ಕಬಳಿಸಿದರು. ನತಾಲಿ ಶಿವರ್ ಅವರನ್ನು ಕಾಟ್‌ ಆ್ಯಂಡ್ ಬೌಲ್ಡ್ ಮಾಡುವ ಮೂಲಕ ದೀಪ್ತಿ ಶರ್ಮಾ ಎದುರಾಳಿಗಳಿಗೆ ಇನ್ನಷ್ಟು ಸಂಕಷ್ಟ ತಂದಿತ್ತರು. ಸಾರಾ ಟೇಲರ್‌ ಅವರು ಶಿಖಾ ಪಾಂಡೆಗೆ ಬಲಿಯಾಗುವುದರೊಂದಿಗೆ ಭಾರತ ಪಾಳಯದಲ್ಲಿ ಸಂಭ್ರಮ ಅಲೆದಾಡಿತು. ಆದರೆ ನಂತರ ಇಂಗ್ಲೆಂಡ್ ಮೇಲುಗೈ ಸಾಧಿಸಿತು.

ಬ್ರುಂಟ್‌ಗೆ ಐದು ವಿಕೆಟ್‌:ಸ್ಫೋಟಕ ಬ್ಯಾಟ್ಸ್‌ವುಮನ್ ಜೆಮಿಮಾ ರಾಡ್ರಿಗಸ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಭಾರತಕ್ಕೆ ಮೊದಲ ಓವರ್‌ನಲ್ಲೇ ಪೆಟ್ಟು ನಿಡಿದ ಕ್ಯಾಥರಿನ್ ಬ್ರುಂಟ್‌ ಒಟ್ಟು ಐದು ವಿಕೆಟ್ ಕಬಳಿಸಿದರು. ಮಂದಾನ ಮತ್ತು ರಾವತ್ ಜೊತೆಯಾಟ ಮುರಿದು ಬಿದ್ದ ನಂತರ ಮಿಥಾಲಿ ಬಳಗ ಮತ್ತೊಮ್ಮೆ ಕುಸಿತ ಕಂಡಿತು. ಆರನೇ ಕ್ರಮಾಂಕದ ದೀಪ್ತಿ ಶರ್ಮಾ ಮತ್ತು ಒಂಬತ್ತನೇ ಕ್ರಮಾಂಕದ ಶಿಖಾ ಪಾಂಡೆ ಛಲದಿಂದ ಹೋರಾಡಿ ಮೊತ್ತ 200 ದಾಟುವಂತೆ ಮಾಡಿದರು. ಮಿಥಾಲಿ ರಾಜ್ ನಿರಾಸೆ ಅನುಭವಿಸಿದರು.

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ ಭಾರತ 50 ಓವರ್‌ಗಳಲ್ಲಿ8ಕ್ಕೆ 205 (ಸ್ಮೃತಿ ಮಂದಾನ 66, ಪೂನಮ್‌ ರಾವತ್‌ 56, ದೀಪ್ತಿ ಶರ್ಮಾ ಔಟಾಗದೆ 27, ಶಿಖಾ ಪಾಂಡೆ 26; ಕ್ಯಾಥರಿನ್‌ ಬ್ರುಂಟ್‌ 28ಕ್ಕೆ5, ಆನ್ಯಾ ಶ್ರುಬ್‌ಸೋಲ್‌ 44ಕ್ಕೆ1, ಜಾರ್ಜಿಯಾ ಎಲ್ವಿಸ್‌ 29ಕ್ಕೆ1, ನಥಾಲಿ ಶಿವರ್‌ 33ಕ್ಕೆ1); ಇಂಗ್ಲೆಂಡ್‌ 48.5 ಓವರ್‌ಗಳಲ್ಲಿ 8ಕ್ಕೆ 208 (ಟಾಮಿ ಬ್ಯೂಮಾಂಟ್‌ 21, ಹಿದರ್‌ ನೈಟ್‌ 47, ಡ್ಯಾನಿ ವೈಟ್‌ 56, ಜಾರ್ಜಿಯಾ ಎಲ್ವಿಸ್‌ ಔಟಾಗದೆ 33; ಜೂಲನ್‌ ಗೋಸ್ವಾಮಿ 41ಕ್ಕೆ3, ಶಿಖಾ ಪಾಂಡೆ 34ಕ್ಕೆ2, ದೀಪ್ತಿ ಶರ್ಮಾ 47ಕ್ಕೆ1, ಪೂನಮ್‌ ಯಾದವ್‌ 41ಕ್ಕೆ2). ಫಲಿತಾಂಶ: ಇಂಗ್ಲೆಂಡ್‌ಗೆ 2 ವಿಕೆಟ್‌ಗಳ ಗೆಲುವು; ಭಾರತಕ್ಕೆ 2-1ರಿಂದ ಸರಣಿ ಜಯ. ಪಂದ್ಯ ಶ್ರೇಷ್ಠ: ಕ್ಯಾಥರಿನ್‌ ಬ್ರುಂಟ್‌, ಸರಣಿ ಶ್ರೇಷ್ಠ: ಸ್ಮೃತಿ ಮಂದಾನ.

‘ವೈಟ್‌ವಾಷ್‌ ಅವಕಾಶ ಕೈತಪ್ಪಿದ್ದು ಬೇಸರ ತಂದಿದೆ’

ಇಂಗ್ಲೆಂಡ್ ತಂಡವನ್ನು ವೈಟ್‌ ವಾಷ್ ಮಾಡುವ ಅವಕಾಶ ಇದ್ದರೂ ಅದನ್ನು ಕಳೆದುಕೊಂಡದ್ದು ಮತ್ತು ಆ ಮೂಲಕ ಎರಡು ಪಾಯಿಂಟ್‌ಗಳನ್ನು ಬಿಟ್ಟುಕೊಡಬೇಕಾಗಿ ಬಂದದ್ದು ಬೇಸರ ತಂದಿದೆ ಎಂದು ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿದರು.

ಪಂದ್ಯದ ನಂತರ ಮಾತನಾಡಿದ ಅವರು ಕೊನೆಯ ಪಂದ್ಯ ಸೋತರೂ ವಿಶ್ವ ಚಾಂಪಿಯನ್ನರ ಎದುರು ಸರಣಿ ಗೆಲ್ಲಲು ಸಾಧ್ಯವಾದದ್ದು ಸಂತಸ ತಂದಿದ್ದು ಇದು ತಂಡದ ಭರವಸೆಯನ್ನು ಹೆಚ್ಚಿಸಿದೆ ಎಂದರು.

‘ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಎದುರು ಕೂಡ ಹೀಗೆಯೇ ಆಗಿತ್ತು. ಹೀಗಾಗಿ ಒಟ್ಟು ಎಂಟು ಪಾಯಿಂಟ್‌ಗಳನ್ನು ಕಳೆದುಕೊಳ್ಳಬೇಕಾಗಿ ಬಂದಿದೆ. ಇನ್ನು ಉಳಿದಿರುವುದು ವೆಸ್ಟ್ ಇಂಡೀಸ್ ಎದುರಿನ ಸರಣಿ ಮಾತ್ರ. ಅದರಲ್ಲಿ ಪೂರ್ಣ ಪಾಯಿಂಟ್ಸ್ ಗಳಿಸಲು ಪ್ರಯತ್ನಿಸಬೇಕಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.