ADVERTISEMENT

ಮಹಿಳಾ ಕ್ರಿಕೆಟ್‌ | INDW vs ENGW: ಸರಣಿ ವಶದ ಛಲದಲ್ಲಿ ಕೌರ್‌ ಪಡೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 0:24 IST
Last Updated 9 ಜುಲೈ 2025, 0:24 IST
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್   

ಮ್ಯಾಂಚೆಸ್ಟರ್: ಭಾರತದ ವನಿತೆಯರು ಬುಧವಾರ ನಡೆಯಲಿರುವ ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟಿ20 ಕ್ರಿಕೆಟ್‌ ಪಂದ್ಯವನ್ನು ಗೆದ್ದು, ಸರಣಿ ವಶಪಡಿಸಿಕೊಳ್ಳುವ ಛಲದಲ್ಲಿದ್ದಾರೆ.

ಐದು ಪಂದ್ಯಗಳ ಸರಣಿಯಲ್ಲಿ ಭಾರತ 2–1ರಿಂದ ಮುನ್ನಡೆ ಸಾಧಿಸಿದೆ. ಮೊದಲೆರಡು ಪಂದ್ಯದಲ್ಲಿ ಭಾರತ ಗೆದ್ದಿದ್ದರೆ, ಮೂರನೇ ಪಂದ್ಯದಲ್ಲಿ ಆತಿಥೇಯ ತಂಡವು ಜಯ ಸಾಧಿಸಿತು. ಸರಣಿಯನ್ನು ಜೀವಂತವಾಗಿ ಉಳಿಸುವ ನಿಟ್ಟಿನಲ್ಲಿ ಇಂಗ್ಲೆಂಡ್ ತಂಡಕ್ಕೆ ಈ ಪಂದ್ಯ ಮಹತ್ವದ್ದಾಗಿದೆ. 

ಶುಕ್ರವಾರ ನಡೆದ ಮೂರನೇ ಪಂದ್ಯದಲ್ಲಿ ಭಾರತ ಐದು ರನ್‌ಗಳಿಂದ ಸೋತಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 171 ರನ್‌ ಗಳಿಸಿತ್ತು. ಗುರಿ ಬೆನ್ನಟ್ಟಿದ್ದ ಹರ್ಮನ್‌ಪ್ರೀತ್‌ ಕೌರ್‌ ಬಳಗವು ಒಂದು ಹಂತದಲ್ಲಿ ಗೆಲುವಿನ ಹಾದಿಯಲ್ಲಿತ್ತು. ಆದರೆ ಕೊನೆಯ ಹಂತದಲ್ಲಿ ಪರದಾಟ ನಡೆಸಿ, 5 ವಿಕೆಟ್‌ಗೆ 166 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. 

ADVERTISEMENT

ಉಪನಾಯಕಿ ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್ ಮತ್ತು ಅಮನ್‌ಜೋತ್ ಕೌರ್ ಸರಣಿಯಲ್ಲಿ ಉತ್ತಮ ರನ್‌ ಕೊಡುಗೆ ನೀಡುತ್ತಿದ್ದಾರೆ. ಆದರೆ, ಅನುಭವಿಗಳಾದ ಶೆಫಾಲಿ ವರ್ಮಾ ಮತ್ತು ಹರ್ಮನ್‌ಪ್ರೀತ್‌ ಅವರಿಂದ ನಿರೀಕ್ಷಿತ ಕಾಣಿಕೆ ಸಿಗುತ್ತಿಲ್ಲ. ಅವರಿಬ್ಬರ ಮೇಲೆ ಹೆಚ್ಚಿನ ಒತ್ತಡವಿದೆ. 

ಸರಣಿಯಲ್ಲಿ ಸ್ಪಿನ್ನರ್‌ಗಳಾದ ಎನ್. ಶ್ರೀಚರಣಿ  (8 ವಿಕೆಟ್‌), ದೀಪ್ತಿ ಶರ್ಮಾ (6) ಮತ್ತು ವೇಗಿ ಅರುಂಧತಿ ರೆಡ್ಡಿ (4) ಉತ್ತಮ ಪ್ರದರ್ಶನ ತೋರಿದ್ದಾರೆ. ಆದರೆ, ಎಡಗೈ ಸ್ಪಿನ್ನರ್ ರಾಧಾ ಯಾದವ್ ಮತ್ತು ವೇಗಿ ಅಮನ್‌ಜೋತ್ ಕೊಂಚ ದುಬಾರಿಯಾಗಿದ್ದಾರೆ. 

ಪಂದ್ಯ ಆರಂಭ: ರಾತ್ರಿ 11

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.