ಲಂಡನ್: ಏಕದಿನ ಹಾಗೂ ಟಿ20 ಕ್ರಿಕೆಟ್ ಸರಣಿಗಳಲ್ಲಿ ಆಡಲು ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಮಹಿಳಾ ತಂಡಕ್ಕೆ ಶನಿವಾರ ಇಲ್ಲಿನ ‘ಇಂಡಿಯಾ ಹೌಸ್’ನಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
ಮುಖ್ಯ ಕೋಚ್ ಅಮೋಲ್ ಮಜುಂದಾರ್ ನೇತೃತ್ವದಲ್ಲಿ ಮಹಿಳಾ ತಂಡ ಹಾಗೂ ಸಹಾಯಕ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ಇಂಗ್ಲೆಂಡ್‌ಗೆ ಭಾರತದ ಹೈಕಮಿಷನರ್ ಆಗಿರುವ ವಿಕ್ರಂ ದೊರೆಸ್ವಾಮಿ ಅವರು ಆಟಗಾರ್ತಿಯರು ಹಾಗೂ ಕೋಚ್ ಸಿಬ್ಬಂದಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಲಂಡನ್‌ನಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.
‘ಇವರು ಬರೀ ಕ್ರೀಡಾಪಟುಗಳಷ್ಟೇ ಅಲ್ಲ. ಬೇರೆ ಬೇರೆ ರಾಜ್ಯಗಳಿಂದ ಆಯ್ಕೆಯಾಗಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆಯಲು ಕ್ರೀಡೆಯಿಂದ ಸಾಧ್ಯ ಎಂಬ ಸಂದೇಶವನ್ನು ಹೊತ್ತು ತಂದ ಪ್ರತಿನಿಧಿಗಳು. ತಮ್ಮ ಉತ್ತಮ ಆಟದಿಂದಾಗಿ ವಿಶ್ವದೆಲ್ಲೆಡೆ ಇರುವ ಭಾರತೀಯರಿಗೆ ಸ್ಫೂರ್ತಿಯಾಗಿದ್ದಾರೆ’ ಎಂದು ದೊರೆಸ್ವಾಮಿ ಪ್ರಶಂಸೆ ವ್ಯಕ್ತಪಡಿಸಿದರು.
ಆಲ್‌ರೌಂಡರ್ ಜೆಮಿಮಾ ರಾಡ್ರಿಗಸ್ ಅವರು ‘ಶೋಲೆ’ ಹಿಂದಿ ಚಿತ್ರದ ‘ಯೇ ದೋಸ್ತಿ..ಹಮ್ ನಹೀ ತೋಡೆಂಗೆ..’ ಗೀತೆಯನ್ನು ಹಾಡಿ, ಅಭಿಮಾನಿಗಳನ್ನು ರಂಜಿಸಿದರು.
ಭಾರತ– ಇಂಗ್ಲೆಂಡ್ ನಡುವಣ ಟಿ20 ಸರಣಿಯ ನಾಲ್ಕನೇ ಪಂದ್ಯವು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.