ADVERTISEMENT

WPL–2023 | ಗೆಲುವಿನ ಒತ್ತಡದಲ್ಲಿ ಆರ್‌ಸಿಬಿ, ಇಂದು ಗುಜರಾತ್‌ ವಿರುದ್ಧ ಸೆಣಸಾಟ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 19:31 IST
Last Updated 7 ಮಾರ್ಚ್ 2023, 19:31 IST
ಆರ್‌ಸಿಬಿ ತಂಡದ ಆಟಗಾರ್ತಿಯರು
ಆರ್‌ಸಿಬಿ ತಂಡದ ಆಟಗಾರ್ತಿಯರು   

ಮುಂಬೈ: ಸತತ ಎರಡು ಪಂದ್ಯಗಳನ್ನು ಸೋತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಡಬ್ಲ್ಯುಪಿಎಲ್‌ ಟಿ20 ಟೂರ್ನಿಯಲ್ಲಿ ಬುಧವಾರ ಗುಜರಾತ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದ್ದು, ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಸ್ಮೃತಿ ಮಂದಾನ ಬಳಗ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಕೈಯಲ್ಲಿ ಪರಾಭವಗೊಂಡಿದ್ದರೆ, ಸೋಮವಾರ ನಡೆದಿದ್ದ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಎದುರು 9 ವಿಕೆಟ್‌ಗಳಿಂದ ಸೋತಿತ್ತು.

ಆರ್‌ಸಿಬಿಯ ಬ್ಯಾಟರ್‌ಗಳು ಮತ್ತು ಬೌಲರ್‌ಗಳು ಎರಡೂ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ್ದರು. ಮುಂಬೈ ಮತ್ತು ಡೆಲ್ಲಿ ತಂಡಗಳ ರೀತಿ ಅಬ್ಬರದ ಆಟವಾಡುವಲ್ಲಿ ಮಂದಾನ ಬಳಗ ವಿಫಲವಾಗಿತ್ತು. ತಂಡದಲ್ಲಿರುವ ವಿದೇಶಿ ಆಟಗಾರ್ತಿಯರೂ ಫಾರ್ಮ್‌ ಕಂಡುಕೊಂಡಿಲ್ಲ.

ADVERTISEMENT

‘ಮೊದಲ ಎರಡು ಪಂದ್ಯಗಳಲ್ಲಿ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿಲ್ಲ. ಆದ್ದರಿಂದ ಪುಟಿದೆದ್ದು ನಿಲ್ಲುವುದು ಅಗತ್ಯ’ ಎಂದು ಸ್ಮೃತಿ ಅವರು ಮುಂಬೈ ವಿರುದ್ಧದ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದರು.

‘ಫ್ರಾಂಚೈಸ್‌ ಕ್ರಿಕೆಟ್‌ನಲ್ಲಿ ಒಂದೆರಡು ಸೋಲಿನ ಬಳಿಕ ಮರುಹೋರಾಟ ನಡೆಸಲು ಅವಕಾಶವಿದೆ. ಆದ್ದರಿಂದ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ’ ಎಂದಿದ್ದರು.

ಗುಜರಾತ್‌ ಜೈಂಟ್ಸ್‌ ಕೂಡಾ ತಾನಾಡಿದ ಎರಡೂ ಪಂದ್ಯಗಳಲ್ಲಿ ಪರಾಭವಗೊಂಡಿದ್ದು, ಪುಟಿದೆದ್ದು ನಿಲ್ಲುವ ತವಕದಲ್ಲಿದೆ. ಚೊಚ್ಚಲ ಗೆಲುವಿನ ಕನಸಿನೊಂದಿಗೆ ಉಭಯ ತಂಡಗಳು ಕಣಕ್ಕಿಳಿಯಲಿರುವುದರಿಂದ ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.